ದೀಪಾವಳಿ ಪ್ರಯುಕ್ತ ಪತ್ರಕರ್ತರಿಗೆ ಭರ್ಜರಿ ನಗದು ಗಿಫ್ಟ್ | ಸಿಎಂ ವಿರುದ್ಧ ದೂರು
ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರಕರ್ತರಿಗೆ ಈ ಬಾರಿ ಭರ್ಜರಿ ಗಿಫ್ಟ್ ಬಂದಿದೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಸಿಎಂಒ ಕಡೆಯಿಂದ ಸಿಹಿ ಹಾಗೂ ಫ್ರೂಟ್ಸ್ ಗಳ ಉಡುಗೊರೆ ಬರುತ್ತಿತ್ತು. ಆದರೆ ಈ ಬಾರಿ ಲಕೋಟೆಯಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಹಣ ಉಡುಗೊರೆಯಾಗಿ ಬಂದಿರುವುದು ಪತ್ರಕರ್ತರಿಗೆಲ್ಲಾ ಆಶ್ಚರ್ಯ ಉಂಟುಮಾಡಿದೆ. ಹಾಗಾದರೆ ಇಷ್ಟೊಂದು ಹಣ ಯಾಕೆ ಬಂದಿರಬಹುದು? ಇದರೊಳಗಿನ ಮರ್ಮ ಏನು? ಪತ್ರಕರ್ತರು ಹಣ ತೆಗೆದುಕೊಂಡರಾ? ಇಲ್ವಾ ? ಅಂತ ನೋಡೋಣ.
ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿಯ ಪ್ರಯುಕ್ತ ಉಡುಗೊರೆಯಾಗಿ 1 ಲಕ್ಷ ರೂಪಾಯಿ ನಗದು ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.
ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರು ಹೇಳಿದ ಪ್ರಕಾರ ದೀಪಾವಳಿ ಪ್ರಯುಕ್ತ ತಮಗೆ ಅಕ್ಟೋಬರ್ 22 ರಂದು ಉಡುಗೊರೆಯಾಗಿ ಸಿಹಿ ಹಾಗೂ ಡ್ರೈಫ್ರೂಟ್ಸ್ ಇರುವ ಬಾಕ್ಸ್ ಬಂದಿದ್ದು, ಅದರ ಜೊತೆಗೆ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಕೂಡ ಬಂದಿದೆ ಎಂದು ಆರೋಪಿಸಿದ್ದಾರೆ. ಕೆಲವು ಪತ್ರಕರ್ತರು ಇದರಿಂದ ಆಕ್ರೋಶಗೊಂಡು ನಗದು ಉಡುಗೊರೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಸಿಎಂಒ ಗೆ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಇದು ತೆರಿಗೆದಾರರ ಹಣದ ದುರುಪಯೋಗ , ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ. ಈ ರೀತಿಯ ಉಡುಗೊರೆ ನೀಡುವುದಕ್ಕೆ ಹಣದ ಮೂಲ ಯಾವುದು, ಹೀಗೇ ಎಷ್ಟು ಮಂದಿಗೆ ಹಣ ನೀಡಲಾಗಿದೆ ಮತ್ತು ಎಷ್ಟು ಮಂದಿ ಅದನ್ನು ಹಿಂತಿರುಗಿಸಿದ್ದಾರೆ ಎಂಬುದರ ಪೂರ್ಣ ಮಾಹಿತಿ ರಾಜ್ಯದ ಜನತೆಗೆ ತಿಳಿಯಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರ್ನಾಟಕದ ಉಸ್ತುವಾರಿ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್ದಿಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿ “ಸಿಎಂ ಬೊಮ್ಮಾಯಿ ಹಾಗೂ ಅವರ ಕಚೇರಿಯಿಂದ ಲಂಚದ ಆಮಿಷದ ಹಗರಣವನ್ನು ಬಯಲಿಗೆಳೆದಿರುವ ದಿಟ್ಟ ಪತ್ರಕರ್ತರಿಗೆ ಹ್ಯಾಟ್ಸ್ ಆಫ್ “, ಎಲ್ಲರೂ ಮಾರಾಟಕ್ಕೆ ಇಲ್ಲ ಎಂಬುದನ್ನು ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ವಿಷಯವಾಗಿ ಸ್ಪಷ್ಟನೆ ನೀಡಿರುವ ಸಿಎಂಒ, “ಸಿಎಂ ಬೊಮ್ಮಾಯಿಯವರಿಗಾಗಲೀ, ಅಥವಾ ಮಾಧ್ಯಮಗಳೊಂದಿಗೆ ಸಮನ್ವಯ ಕಾರ್ಯದಲ್ಲಿ ತೊಡಗಿರುವವರಿಗಾಗಲೀ ನಗದು ಉಡುಗೊರೆ ಬಗ್ಗೆ ಮಾಹಿತಿ ಇಲ್ಲ”, ನಾವು ಪತ್ರಕರ್ತರಿಗೆ ಹಾಗೂ ಸಂಪಾದಕರಿಗೆ ಸ್ವೀಟ್ ಬಾಕ್ಸ್ ಗಳನ್ನು ಕಳಿಸಿಕೊಟ್ಟಿದ್ದೇವೆ . ಆದರೆ ಅದರಲ್ಲಿ ನಗದು ಉಡುಗೊರೆ ಇದ್ದದ್ದು ತಿಳಿದಿರಲಿಲ್ಲ ಎಂದು ಹೇಳಿದೆ. ಈ ಬಗ್ಗೆ ಕ್ಷಮೆ ಕೋರಿದ ಮುಖ್ಯಮಂತ್ರಿ ತಮಗೆ ನಗದು ಉಡುಗೊರೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್ತಿನ (ಜೆಎಸ್ ಪಿ) ಸಹ ಅಧ್ಯಕ್ಷ ಆದರ್ಶ್ ಆರ್ ಅಯ್ಯರ್ ಅವರು ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು, ದೀಪಾವಳಿ ಉಡುಗೊರೆಯ ಹೆಸರಿನಲ್ಲಿ ಪತ್ರಕರ್ತರಿಗೆ ಲಂಚದ ಆಮಿಷವೊಡ್ಡಿರುವ ಸಿಎಂ ಬೊಮ್ಮಾಯಿ ಹಾಗೂ ಅವರ ಮಾಧ್ಯಮ ಸಂಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಲೋಕಾಯುಕ್ತ ಮೂಲಗಳ ಪ್ರಕಾರ , ಪ್ರಕ್ರಿಯೆಗಳ ಅನುಸಾರ ಎಫ್ಐಆರ್ ದಾಖಲಿಸುವುದಕ್ಕೂ ಮೊದಲು ಪ್ರಾಥಮಿಕ ತನಿಖೆ ನಡೆಸಬೇಕಾಗುತ್ತದೆ. ಮೇಲ್ನೋಟಕ್ಕೆ ಯಾವುದಾದರೂ ಅಂಶಗಳು ಕಂಡುಬಂದಲ್ಲಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ತದನಂತರ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.