ಉಳ್ಳಾಲ: ಪತ್ನಿಯ ಕೊಂದು ನೇಣು ಬಿಗಿದು ಪತಿ ಆತ್ಮಹತ್ಯೆ

Share the Article

ಉಳ್ಳಾಲ : ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಂದು ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ.

ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ(45) ಕೊಲೆಯಾದ ಮಹಿಳೆ ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ (55) ಆತ್ಮಹತ್ಯೆಗೈದವರು. ಗುರುವಾರ ಬೆಳಗ್ಗೆ ಶೋಭಾ ಅವರು ಮನೆ ಹತ್ತಿರದ ಇನ್ನೂರು ಗುತ್ತು ಕುಟುಂಬಸ್ಥರ ಮನೆಯಿಂದ ಗೊಬ್ಬರ ತಂದಿದ್ದರು.ಮಧ್ಯಾಹ್ನ 12 ಗಂಟೆ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಇನ್ನೂರು ಗುತ್ತು ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾನೆ.

ಪಕ್ಕದ ಮನೆಯ ಶಕುಂತಳ ಶೆಟ್ಟಿ ಅವರು ಶೋಭಾ ಅವರ ಮನೆಯೊಳಗೆ ಪ್ರವೇಶಿಸಿದಾಗ ಶೋಭಾ ಅವರು ಬೆಡ್ ರೂಮಿನ‌ ಮಂಚದಲ್ಲಿ ಹೆಣವಾಗಿ ಬಿದ್ದಿದ್ದರು.

ಗಾಬರಿಗೊಂಡ ಶಕುಂತಳಾ ಅವರು ಮನೆಮಂದಿಗೆ ತಿಳಿಸಿದಾಗ ಪಕ್ಕದ ತೋಟದಲ್ಲಿ ಮರವೊಂದಕ್ಕೆ ಶೋಭಾ ಅವರ ಪತಿ ಶಿವಾನಂದ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದು ಬೆಳಕಿಗೆ ಬಂತು.

ಶಿವಾನಂದ ಪೂಜಾರಿ ಅವರು ಪೈಂಟರ್ ಆಗಿ ಕೆಲಸ ಮಾಡುತ್ತಿದ್ದು ಪತ್ನಿ ಅಲ್ಲದೆ ಮಗಳ ಮೇಲೂ ನಿರಂತರವಾಗಿ ಸಂಶಯ ಪಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶೋಭಾ ಅವರ ಕಿರಿಯ ಮಗಳು ಕಾವ್ಯ ಎರಡು ವರ್ಷದ ಹಿಂದಷ್ಟೆ ಮದುವೆಯಾಗಿದ್ದು.ಹಿರಿಯ ಮಗ ಕಾರ್ತಿಕ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ.ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ‌.

Leave A Reply