ಕಳ್ಳತನಕ್ಕೆಂದು ಐಶಾರಾಮಿ ಮನೆಗೆ ನುಗ್ಗಿ ಆತ್ಮಹತ್ಯೆ ಮಾಡಿಕೊಂಡ ಕಳ್ಳ!!

Share the Article

ಕಳ್ಳ ಅಂದ ಮೇಲೆ ಎಲ್ಲಿ ಹೇಗೆ ಎಷ್ಟು ದೋಚಿಕೊಂಡು ಹೋಗಬಹುದು ಎಂದು ಯೋಚಿಸುತ್ತಾರೆ. ಆದ್ರೆ, ಇಲ್ಲೊಬ್ಬ ಕಳ್ಳ ಮಾತ್ರ ವಿಚಿತ್ರದಲ್ಲಿ ವಿಚಿತ್ರವಾದವ. ಯಾಕಂದ್ರೆ, ಕಳ್ಳತನಕ್ಕೆಂದು ಐಷಾರಾಮಿ ಮನೆಗೆ ನುಗ್ಗಿ ಕಳ್ಳತನ ಮಾಡುವ ಬದಲು ಜೀವವನ್ನೇ ಕಳೆದುಕೊಂಡಿದ್ದಾನೆ.

ಹೌದು. ಈ ಘಟನೆ ನಂಬಲು ಅಸಾಧ್ಯವಾದರೂ, ಇದು ನಿಜ ಸಂಗತಿಯಾಗಿದ್ದು ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ. ಅಸ್ಸಾಂ ಮೂಲದ ದಿಲೀಪ್ ಕುಮಾರ್ (46) ಮೃತ ಕಳ್ಳ.

ಇಂದಿರಾನಗರದ ಟೆಕ್ಕಿ ಫ್ಯಾಮಿಲಿ ಯೂರೋಪ್‌ ಪ್ರವಾಸ ಹೋಗಿದ್ದರು. ಮನೆಗೆ ಬೀಗ ಹಾಕಿರುವುದನ್ನು ಗುರುತಿಸಿದ್ದ ದಿಲೀಪ್‌ ಬಹದ್ದೂರ್‌ ಎಂಬಾತ ಮನೆಗೆ ನುಗ್ಗಿದ್ದಾನೆ. ಬೆಳಗಿನ ಜಾವ ಮನೆಗೆ ನುಗ್ಗಿದವನು ಸಂಜೆಯವರೆಗೂ ಅಲ್ಲೇ ಇದ್ದಾನೆ. ಅಷ್ಟೇ ಅಲ್ಲದೆ ಅಲ್ಲೇ ಸ್ನಾನ ಕೂಡಾ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಎಲ್ಲಾ ಕಡೆ ಹುಡುಕಾಟ ಕೂಡಾ ನಡೆಸಿದ್ದಾನೆ. ನಂತರ ಆತನಿಗೆ ಏನು ಆಗಿದೆ ಗೊತ್ತಿಲ್ಲ, ಆತ ಮಾತ್ರ ದೇವರ ಕೋಣೆಯ ಮುಂದಿನ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯವರು ವಾಪಸ್ ಬಂದ ವೇಳೆ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ದೇವರ ಮನೆಯ ಕಿಟಕಿ ತೆಗೆದು ನೋಡಿದಾಗ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ತಕ್ಷಣ ಮನೆ ಮಾಲೀಕರು ಇಂದಿರಾ ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ಮೃತ ದಿಲೀಪ್‌ ಬಹದ್ದೂರ್‌ 2006ರಲ್ಲಿ ಒಮ್ಮೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಇದೀಗ ಘಟನೆ ಸಂಬಂಧ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

Leave A Reply