Home ದಕ್ಷಿಣ ಕನ್ನಡ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ : ಪೊಲೀಸ್ ಕಾನ್‌ಸ್ಟೆಬಲ್‌‌ಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ : ಪೊಲೀಸ್ ಕಾನ್‌ಸ್ಟೆಬಲ್‌‌ಗೆ ಜೀವಾವಧಿ ಶಿಕ್ಷೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ ಪ್ರಕರಣದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್‌ ಕಾನ್‌ಸ್ಟೆಬಲ್‌ ಪ್ರವೀಣ್‌ ಸಾಲ್ಯಾನ್‌ (35) ಮೇಲಿದ್ದ ಆರೋಪವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ)ದಲ್ಲಿ ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಬಜಪೆ ಸಿದ್ಧಾರ್ಥ ನಗರ ನಿವಾಸಿ ಪ್ರವೀಣ್‌ ಸಾಲ್ಯಾನ್‌ 2015ರ ಫೆ. 16ರಂದು ಅಪ್ರಾಪ್ತ ವಯಸ್ಕ ಬಾಲಕಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಅನಂತರ ತಾನು ಪ್ರೀತಿಸುತ್ತಿರುವುದಾಗಿ ನಾಟಕವಾಡಿದ ಆತ ನಿರಂತರ ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಮೂಲಕ ಆಕೆಯನ್ನು ಸಂಪರ್ಕಿಸುತ್ತಿದ್ದ. ತನ್ನ ಗುಪ್ತಾಂಗದ ಚಿತ್ರಗಳನ್ನು ಆಕೆಗೆ ಕಳುಹಿಸಿ, ಅಶ್ಲೀಲ ಸಂಭಾಷಣೆಯನ್ನೂ ನಡೆಸುತ್ತಿದ್ದ. ಬಳಿಕ ಆಕೆಯಲ್ಲಿ ಒಂದು ಲಕ್ಷ ರೂ. ಹಣ ಅಥವಾ ಚಿನ್ನ ನೀಡಬೇಕು ಎಂದು ಬೇಡಿಕೆಯಿಟ್ಟು ಬೆದರಿಸಿದ್ದ. ಇದರಿಂದ ಆತಂಕಗೊಂಡ ಆಕೆ 2015ರ ಜೂ. 10ರಂದು ಬೆಳಗ್ಗೆ 5ರಿಂದ 6.15ರ ನಡುವೆ ತನ್ನ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಎಫ್‌ಟಿಎಸ್‌ಸಿ-1 (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿ ಅಪರಾಧಿಗೆ ಐಪಿಸಿ 305ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸೆಕ್ಷನ್‌ 12ರಡಿ (ಪೋಕ್ಸೋ) 3 ವರ್ಷ ಕಠಿನ ಸಜೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.