ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ

Share the Article

ಬಂಟ್ವಾಳ : ದಕ್ಷಿ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ
ಬಿಜೆಪಿ ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಘಟನೆಯೊಂದು ನಡೆದಿತ್ತು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರವು ಈಗ ಸಿಐಡಿಗೆ ವರ್ಗಾಯಿಸಿದೆ.

ಪ್ರಕರಣದ ಕಡತಗಳನ್ನು ಬಂಟ್ವಾಳ ಪೊಲೀಸರು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ.

ಈ ಘಟನೆಯು ಅ.13 ರ ಗುರುವಾರ ರಾತ್ರಿ ಸುಮಾರು 11.15ಕ್ಕೆ ನಡೆದಿತ್ತು. ಕೆಲ ದುಷ್ಕರ್ಮಿಗಳು ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿದ್ದರು. ಅನಂತರ ಶಾಸಕರ ಕಾರು ಚಾಲಕನ ದೂರಿನಂತೆ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿ ಫಳ್ನೀರ್ ನಿವಾಸಿ ರಿಯಾಜ್ (38) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಅನಂತರ ಈ ಘಟನೆಗೆ ಸಂಬಂಧಪಟ್ಟ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದರು.

ಶನಿವಾರ ಮತ್ತಷ್ಟು ತನಿಖೆಯನ್ನು ನಡೆಸಿದ ಪೊಲೀಸರು ಆರೋಪಿಯ ಮನೆಯಲ್ಲಿ ಹುಡುಕಾಟ ನಡೆಸಿ, ಎರಡು ಮೊಬೈಲ್, ಸ್ಪಾನರ್, ರಾಡ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಪಾನರ್ ಅನ್ನು ಬಳಸಿ ಆರೋಪಿ ದೂರುದಾರರನ್ನು ಬೆದರಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ಸಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದರು.

ಈ ನಡುವೆ ಆರೋಪಿ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಈ ಬಗ್ಗೆ ಸಂಘಟನೆಗಳು ಕೂಲಂಕಷ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದ್ದು, ಇಂದಿನಿಂದಲೇ ತನಿಖೆ ಆರಂಭವಾಗಿದೆ.

Leave A Reply