ರಾಜ್ಯದ ಮೀನುಗಾರರಿಗೆ ದೀಪಾವಳಿಯ ಭರ್ಜರಿ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉದ್ಘಾಟಿಸಿ, ಮಾತನಾಡುತ್ತಾ ಮೀನುಗಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ ರೂ.ಗಳ ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡುತ್ತಿದ್ದು, ಇದನ್ನು 1000 ಮೀನುಗಾರರಿಗೆ ಸಹಾಯಧನ ಹೆಚ್ಚಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಘೋಷಣೆ ಮಾಡಿದ್ದಾರೆ.
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 3 ರಿಂದ 5 ಲಕ್ಷ ನೀಡಲಾಗುತ್ತಿದ್ದು ಒಳನಾಡು ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದರ ಯೋಜನೆಯಡಿ ನೀಡುವ ಸಹಾಯ ಧನವನ್ನು ಬಳಸಿ ಸುಮಾರು 1000 ಸಂಘಗಳಿಗೆ ಮೀನುಗಾರಿಕೆ ಕೈಗೊಳ್ಳಲು ಮುಂದಾಗಬೇಕು ಎಂದರು. ಈಗಾಗಲೇ ಆದೇಶ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯ ಮೀನುಗಾರಿಕೆಯಲ್ಲಿ ಇನ್ನೂ ಸಾಧನೆ ಮಾಡಬೇಕು. ಹಾಗೆ ನೋಡಿದರೆ ರಫ್ತು ಮಾಡುವಲ್ಲಿ ಆಂಧ್ರಪ್ರದೇಶ ಹೆಸರು ಮಾಡಿದೆ. ಹಾಗಾಗಿ ಒಂದು ತಂಡವನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ಯಲು ಸೂಚಿಸಿರುವುದಾಗಿ ಎಂಬ ಮಾತನ್ನು ಕೂಡಾ ಹೇಳಿರುವುದಾಗಿ ವರದಿಯಾಗಿದೆ.
ಈಗಿರುವ ಮೀನುಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿ, ಈಗಿನ ರಫ್ತು ಪ್ರಮಾಣಕ್ಕಿಂತ ಮೂರುಪಟ್ಟು ಹೆಚ್ಚು ಮಾಡಬೇಕೆಂದು ಸೂಚಿಸಿದ್ದೇನೆ. ಇದಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದರು.
ಮೀನುಗಾರಿಕೆಯ ವಹಿವಾಟನ್ನು ಎಂಟು ಲಕ್ಷ ಕೋಟಿರೂ.ಗಳಿಗೆ ಹೆಚ್ಚಿಸುವ ಗುರಿಇದ್ದು, ಇದು ರಾಜ್ಯದ ಆಂತರಿಕ ಜಿಡಿಪಿಯನ್ನು ಹೆಚ್ಚಿಸುತ್ತದೆ. ಪ್ರಧಾನಿ ಮೋದಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ರಾಜ್ಯದಲ್ಲಿನ ಕೃಷಿ,ಮೀನುಗಾರಿಕೆ, ಕುರಿ ಸಾಕಾಣಿಕೆ ಇವೆಲ್ಲವೂ ಕೊಡುಗೆ ನೀಡಲಿವೆ. ಕೃಷಿಯಲ್ಲಿ ಶೇ. 1 ರ ಅಭಿವೃದ್ಧಯಾದರೆ, ಶೇ.4 ರಷ್ಟು ಉತ್ಪಾದನಾ ಹಾಗೂ ಶೇ.10 ರಷ್ಟು ಅಭಿವೃದ್ಧಿ ಸೇವಾ ವಲಯದಲ್ಲಿ ಆಗುತ್ತದೆ. ಜನರ ದುಡಿಮೆಯೇ ರಾಜ್ಯದ ಆರ್ಥಿಕತೆಯಾಗಿದೆ ಎಂದರು.
ರೈತಕೂಲಿಕಾರರು, ಮೀನುಗಾರರು, ನೇಕಾರರು, ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿದೀ ಯೋಜನೆ ವಿಸ್ತರಿಸಲಾಗಿದೆ. ಈಗಾಗಲೇ 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಇದೇ ವರ್ಷ ವಿತರಿಸುವ ಗುರಿಯನ್ನು ಹೊಂದಿದೆ ಹಾಗೂ ಇದಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು ಎಂದರು.
ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು , ಸ್ಥಳೀಯ ಮಾರುಕಟ್ಟೆ, ಹೀಗೆ ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ. ಮೀನಿನ ಸಂಸ್ಕರಣೆ, ಮೀನು ಆಹಾರ ಉತ್ಪಾದನೆಗೆ ಸರ್ಕಾರ ಸಹಕಾರ ನೀಡುತ್ತದೆ. ಮೀನುಗಾರಿಕೆ ವಲಯದಲ್ಲಿ ಖಾಸಗಿ ವಲಯದ ಆಸಕ್ತಿ, ಹೆಚ್ಚಿನ ಹೂಡಿಕೆ,ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಬರಬೇಕೆಂಬ ಉದ್ದೇಶದಿಂದ ಇಂದಿನ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಸಂದರ್ಭದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವರಾದ ಎಸ್. ಅಂಗಾರ, ಸಚಿವರಾದ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ, ಶಾಸಕ ಸಂಜೀವ ಮಟಂದೂರು, ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್. ಸುಧೀರ್ , ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.