‘ ಬೆಳದಿಂಗಳ ಬೆಳಕಲ್ಲಿ ‘ ಕೆಲಸ ಮಾಡಿದ ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್ !
ವಿಶ್ವದ ದೈತ್ಯ ಟೆಕ್ ಸಂಸ್ಥೆ ಇನ್ಫೋಸಿಸ್ (Infosys) ‘ ಬೆಳದಿಂಗಳ ಬೆಳಕಲ್ಲಿ ‘ ಕೆಲಸ ಮಾಡಿದ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಬೆಳದಿಂಗಳ ಬೆಳಕಿನಲ್ಲಿ ಕೆಲಸ ಮಾಡಿದ ಉದ್ಯೋಗಿಗಳನ್ನು ಯಾಕಪ್ಪಾ ವಜಾ ಮಾಡ್ತಾರೆ ಅಂದ್ಕೊಂಡ್ರಾ, ಇಲ್ಲಿದೆ ಓದಿ ಅಸಲಿ ಬೆಳದಿಂಗಳು !!
ಮೂನ್ ಲೈಟಿಂಗ್ ( moon lighting) ಅಂದರೆ ಖಾಲಿ ಸಮಯದಲ್ಲಿ ಮತ್ತೊಂದು ಕಂಪನಿಗೆ ಕೆಲಸ ಮಾಡುವುದು. ಉದ್ಯೋಗಿಗಳು ಒಂದು ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವಾಗ ಇನ್ನೊಂದು ಕಂಪನಿಗಾಗಿ ಕೆಲಸ ಮಾಡುವುದನ್ನು ಮೂನ್ ಲೈಟಿಂಗ್ ಎನ್ನುತ್ತಾರೆ. ಹೀಗೆ ಬೇರೊಂದು ಕಂಪನಿಗೆ ಕೆಲಸ ಮಾಡಿದ ಉದ್ಯೋಗಿಗಳನ್ನು ವಿಪ್ರೋ ಕಂಪನಿ ಇತ್ತೀಚೆಗೆ ವಜಾ ಮಾಡಿತ್ತು. ಈಗ ಇನ್ಫೋಸಿಸ್ ಸರದಿ.
ಕಳೆದ 12 ತಿಂಗಳ ಕಾಲ ಎರಡು ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ತಿಳಿಸಿರುವ ಇನ್ಫೋಸಿಸ್ ಎಷ್ಟು ಸಂಖ್ಯೆಯಲ್ಲಿ ವಜಾ ಮಾಡಲಾಗಿದೆ ಎಂಬ ವಿವರವನ್ನು ತಿಳಿಸಿಲ್ಲ.
ನಾವು ಮೂನ್ಲೈಟಿಂಗ್ ಅನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಎರಡು ಕಡೆ ಉದ್ಯೋಗ ಮಾಡುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಕೆಲಸದಿಂದಲೇ ವಜಾಗೊಳಿಸಲಾಗುತ್ತದೆ ಎಂದು ಇನ್ಫೋಸಿಸ್ ಈ ಹಿಂದೆ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿತ್ತು. ಆದರೂ ಕೆಲವರು ಎರಡೆರಡು ಕಡೆ ಕೆಲಸ ಮಾಡಿ ದುಡ್ಡು ಎಣಿಸಿದ್ದರು.
ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದ ನಂತ್ರ ಎಲ್ಲಾ ಪ್ರಮುಖ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೂನ್ಲೈಟಿಂಗ್ ವಿರುದ್ಧ ಎಚ್ಚರಿಕೆ ನೀಡಿದ್ದವು. ತನ್ನ ಸಂಸ್ಥೆಯ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇನ್ಫೋಸಿಸ್ ಹೇಳಿತ್ತು.
ಈ ಹಿಂದೆ ವಿಪ್ರೋ ಕೂಡ ಮೂನ್`ಲೈಟಿಂಗ್ ತನ್ನ ಸಿಬ್ಬಂದಿಗಳಿಗೆ ಗೇಟ್ ಪಾಸ್ ನೀಡಿತ್ತು. ಇದೀಗ ಇನ್ಫೋಸಿಸ್ ಕೂಡಾ ಅದೇ ಹಾದಿಯಲ್ಲಿ ಸಾಗಿದ್ದು ತನ್ನ ಡಬಲ್ ಡ್ಯೂಟಿ ಸಿಬ್ಬಂದಿಗಳನ್ನು ವಜಾಗೊಳಿಸಿದೆ.