ತನ್ನ ದೇಹದೊಂದಿಗೆ ವಿಚಿತ್ರವಾಗಿ ಪ್ರಯೋಗ ಮಾಡಿದ ವ್ಯಕ್ತಿಗಳಿವರು ! ವಿಚಿತ್ರ ಆದರೂ ಸತ್ಯ!!!
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ, ನಮಗೆ ಪ್ರಕೃತಿದತ್ತವಾಗಿ ದೊರೆತಿರುವ ಸುಂದರ ದೇಹವನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿ, ಕೀಳರಿಮೆ ಬೆಳೆಸಿಕೊಂಡು ಭಿನ್ನವಾಗಿ ಕಾಣಲು ಹೆಚ್ಚಿನ ಮಂದಿ ಹಾತೊರೆಯವುದು ಸಾಮಾನ್ಯವಾಗಿದೆ.
ಸಾಮಾನ್ಯ ಜನರಿಗಿಂತ ವಿಭಿನ್ನವಾಗಿ ಕಾಣುವ ಹೆಬ್ಬಯಕೆಯಿಂದ ತಮ್ಮ ದೇಹದ ಮೇಲೆಯೇ ಪ್ರಯೋಗ ನಡೆಸಿ, ಪ್ರಾಣಿ ಅಥವಾ ರಾಕ್ಷಸನಂತೆ ಮಾರ್ಪಾಡು ಮಾಡಿಕೊಳ್ಳುವ ಮಂದಿಯಿದ್ದಾರೆ ಎಂದರೆ ಅಚ್ಚರಿಯಾಗಬಹುದು.
ಸಾಮಾನ್ಯವಾಗಿ ವಿಭಿನ್ನವಾಗಿ ಕಾಣಲು ಚಿತ್ರ- ವಿಚಿತ್ರ ಹೇರ್ ಸ್ಟೈಲ್, ಕಲರ್ ಮಾಡುವ ಇಲ್ಲವೇ ವಿವಿಧ ಬಗೆಯ ಆಪರೇಷನ್ ಮಾಡಿ ತಮಗೆ ಬೇಕಾದಂತೆ ದೇಹದ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿರುವ ಅನೇಕ ಸೆಲೆಬ್ರಿಟಿಗಳನ್ನು ನೋಡಿರಬಹುದು. ಈ ನಡುವೆ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಜನಪ್ರಿಯವಾಗಿದ್ದು, ದೇವರ, ತ್ರಿಶೂಲ, ಹೆಸರು, ವಿಭಿನ್ನ ಡಿಸೈನ್ ಹಾಕಿಸಿಕೊಳ್ಳುವವರನ್ನು ಕೂಡ ಗಮನಿಸಿರಬಹುದು. ಆದರೆ, ದೇಹ ಪೂರ್ತಿ ವಿಚಿತ್ರ ಹಚ್ಚೆ ಹಾಕಿಸಿಕೊಂಡವರ ನೋಡಿದ್ದೀರಾ?? ಇಂತಹವರ ಬಗ್ಗೆ ಮಾಹಿತಿ ಇಲ್ಲಿದೆ.
ಮನುಷ್ಯನೋ ಅಥವಾ ಪ್ರಾಣಿಯೋ ಎಂದು ನೋಡುಗರು ಆಶ್ಚರ್ಯಪಡುವಂತೆ , ಬ್ರೆಜಿಲ್ನ ವ್ಯಕ್ತಿಯೊಬ್ಬ ಮುಖವನ್ನು ನಾಯಿಯಂತೆ ಮಾಡಿಸಿಕೊಂಡಿದ್ದಾನೆ. ಬ್ರೆಜಿಲ್ ನ ರೊಡ್ರಿಗೊ ಬ್ರಾಗಾ ಎಂಬ ವ್ಯಕ್ತಿ ವೃತ್ತಿಯಲ್ಲಿ ಆರ್ಟಿಸ್ಟ್ ಆಗಿದ್ದು, ನಾಯಿಗಳ ಮೇಲಿನ ಹುಚ್ಚು ಪ್ರೀತಿಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತನ್ನ ಮುಖವನ್ನು ನಾಯಿಯಂತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ, ಅವರು ರೋಗಗ್ರಸ್ತ ನಾಯಿಯನ್ನು ಕೊಂದು ಆ ನಾಯಿಯ ಮುಖವನ್ನು ಅವನ ಮುಖದ ಮೇಲೆ ಹಾಕಿದ್ದಾರೆ. ಹೀಗಾಗಿ, ಈ ವ್ಯಕ್ತಿ ಡಾಗ್ ಮ್ಯಾನ್ ಎಂದೇ ಫೇಮಸ್ ಆಗಿದ್ದಾರೆ.
ನವದೆಹಲಿ ನಿವಾಸಿ ಕರಣ್ ಸಿಧು ಕಣ್ಣಿನ ಬಿಳಿಗುಡ್ಡೆಯಿಂದ ಹಿಡಿದು ದೇಹದ ಪ್ರತಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದು, ಅದಕ್ಕಾಗಿ, ನ್ಯೂಯಾರ್ಕ್ಗೆ ತೆರಳಿ ತನ್ನ ಕಣ್ಣಿನ ಬಿಳಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡು ಕಪ್ಪು ಮಾಡಿಸಿಕೊಂಡು ಬಂದಿದ್ದಾನೆ. ತಲೆಯಿಂದ ಪಾದದವರೆಗೆ ಎಲ್ಲ ಕಡೆಯಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಟ್ಯಾಟೂ ಜತೆ ವಿಶೇಷವಾಗಿ, ಆತನ ಕಿವಿಯ ರೂಪವನ್ನೂ ಆಪರೇಷನ್ ಮಾಡಿ ಬದಲಾಯಿಸಿಕೊಂಡಿದ್ದು, ಹಲ್ಲು ವಿಶೇಷವಾಗಿರಲಿ ಎಂದು ಮಾಮೂಲಿ ಹಲ್ಲನ್ನು ಕೀಳಿಸಿ ಮೆಟಲ್ ಹಲ್ಲನ್ನು ಹಾಕಿಸಿಕೊಂಡಿದ್ದು, ಇದೆಲ್ಲದರ ಹೊರತಾಗಿ ನಾಲಿಗೆ ಸಾಮಾನ್ಯವಾಗಿರಬಾರದೆಂದು ಅದನ್ನು ಸೀಳಿಸಿ ಹಾವಿನ ನಾಲಿಗೆಯಂತೆ ಸೀಳು ನಾಲಿಗೆ ಮಾಡಿಕೊಂಡಿದ್ದಾನೆ. ಇದನ್ನು ನೋಡಿದವರು ಕಾಲಕ್ಕೆ ತಕ್ಕ ಕೋಲ ಎಂದು ಹೇಳಿದರೂ ಕೂಡ ಅಚ್ಚರಿಯಿಲ್ಲ.
ಟಾಮ್ ಲೆಪರ್ಡ್ ಚೀತಾ ಆಗಲು ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿಯಾಗಿ, ವಿಶ್ವಾದಾದ್ಯಂತ ಲೆಪರ್ಡ್ ಮ್ಯಾನ್ / ಸ್ಕೈ ಎಂದು ಜನಪ್ರಿಯವಾಗಿದ್ದವರು. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ವಿಶ್ವದ ಮೊದಲ ಟ್ಯಾಟೂ ಮ್ಯಾನ್ ಎಂಬ ಹಿರಿಮೆಯ ಗರಿಯನ್ನು ಹೊಂದಿದ್ದವರು. ಸಾಧನೆ ಮಾಡುವ ತುಡಿತದಿಂದ ಹೆಚ್ಚು ಹಚ್ಚೆಗಳನ್ನು ಮಾಡಿಸಿಕೊಂಡು, ಅತಿ ಹೆಚ್ಚು ಹಚ್ಚೆ ಹಾಕಿಸಿಕೊಂಡ ವಯಸ್ಸಾದ ವ್ಯಕ್ತಿ ಎಂದು ಕೂಡ ಪ್ರಖ್ಯಾತಿ ಗಳಿಸಿದ್ದಾರೆ.
ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ತನ್ನ ದೇಹದಾದ್ಯಂತ ಚೀತಾದಂತಹ ಹಚ್ಚೆಗಳನ್ನು ಹೊಂದಿದ್ದರೂ ಕೂಡ ಇಂದಿಗೂ ಅವರನ್ನು ಲೆಪರ್ಡ್ ಮ್ಯಾನ್ ಎಂದು ಕರೆಯಲಾಗುತ್ತದೆ.
ಪ್ರಪಂಚದಾದ್ಯಂತ ಅನೇಕ ಜನರಿದ್ದಾರೆ. ಅವರು ಬಹುಶಃ ಮಾನವರಂತೆ ಕಾಣಲು ಇಷ್ಟಪಡೋದಿಲ್ಲವೋ ಏನೋ ತಿಳಿಯದು. ಅದಕ್ಕಾಗಿಯೇ ಅವರು ತಮ್ಮ ಸಂಪೂರ್ಣ ಲುಕ್ ಪರಿವರ್ತಿಸಿ, ತಮ್ಮನ್ನು ತಾವು ರಾಕ್ಷಸನಂತೆ ಕಾಣುವಂತೆ ಮಾಡಿದ್ದಾರೆ. ಅಂತಹ ಕೆಲವು ಜನರ ಚಿತ್ರಗಳನ್ನು ನೋಡಿದಾಗ ಹೆದರಿಕೆಯಾಗುವುದರಲ್ಲಿ ಸಂಶಯವಿಲ್ಲ.
ಈ ವ್ಯಕ್ತಿ ತನ್ನ ದೇಹದ ಮೇಲೆ ವಿಚಿತ್ರ ಹಚ್ಚೆಗಳನ್ನು ಮಾಡಿಸಿಕೊಂಡಿದ್ದು, ದೇಹದ ಪ್ರತಿಯೊಂದೂ ಭಾಗ, ಕಣ್ಣುಗಳು, ಮೂಗು, ಕಿವಿಗಳು, ಗಂಟಲಿನಲ್ಲೂ ಪಿಯರ್ಸಿಂಗ್ ಮಾಡಿದ್ದಾರೆ. ಇದರ ಜೊತೆಗೆ ಈ ವಿಚಿತ್ರ ಮನುಷ್ಯ, ಮೂಗಿನಲ್ಲಿ ದೊಡ್ಡ ಉಂಗುರವನ್ನು ಸಹ ಧರಿಸಿ ಅಚ್ಚರಿ ಮೂಡಿಸಿದ್ದಾರೆ.
ತಮ್ಮ 16ನೇ ವಯಸ್ಸಿನಲ್ಲಿ ತಮ್ಮ ದೇಹದ ಮೇಲೆ ಮೊದಲ ಟ್ಯಾಟೂ ಹಾಕಿಸಿಕೊಂಡಿರುವ ಈ ವ್ಯಕ್ತಿ, 28ನೇ ವಯಸ್ಸಿಗೆ ಸಂಪೂರ್ಣ ದೇಹದ ಎಲ್ಲ ಅಂಗಗಳಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಶೇಷವೆಂಬಂತೆ, 2006 ರಲ್ಲಿ, ಗಿನ್ನಿಸ್ ವಿಶ್ವ ದಾಖಲೆಯಲ್ಲಿಯು ತನ್ನ ಹೆಸರು ಅಚ್ಚಳಿಯದಂತೆ ಉಳಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.
56 ವರ್ಷದ ಟೆಡ್ ರಿಚರ್ಡ್ಸ್ ಎಂಬ ಯುಕೆಯಲ್ಲಿ ವಾಸಿಸುವ ವ್ಯಕ್ತಿಗೆ ಗಿಳಿ ಎಂದರೆ ಎಲ್ಲಿಲ್ಲದ ವ್ಯಾಮೋಹ, ಹಾಗಾಗಿ, ತನ್ನ ದೇಹದಾದ್ಯಂತ ಗಿಳಿಯಂತಹ ಹಚ್ಚೆಗಳನ್ನು ಮಾಡಿಸಿಕೊಂಡಿದ್ದಾರೆ. ಇವರನ್ನು ಗಿಳಿ ಮನುಷ್ಯ ಎಂದು ಕೂಡ ಕರೆಯಲಾಗುತ್ತದೆ.
ಟೆಡ್ ತನ್ನ ಮೊದಲ ಹಚ್ಚೆಯನ್ನು 1976 ರಲ್ಲಿ ಮಾಡಿಸಿಕೊಂಡಿದ್ದು, ಬಳಿಕ ಅವರು ತಮ್ಮ ಇಡೀ ದೇಹದ ಮೇಲೆ 110 ವಿಶಿಷ್ಟ ಹಚ್ಚೆಗಳನ್ನು ಮಾಡಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದ್ದಾರೆ. ಇದರ ಜೊತೆಗೆ ಅವರು 50 ಪಿಯರ್ಸಿಂಗ್ ಸಹ ಮಾಡಿಸಿ ಕೊಂಡು ನಾಲಿಗೆಯನ್ನು ಸಹ ಕತ್ತರಿಸಿಕೊಂಡಿದ್ದಾರೆ.
ಲಂಡನ್ನಲ್ಲಿ ವಾಸಿಸುತ್ತಿದ್ದ ಹೊರೇಸ್ ರಿಡ್ಲರ್ ಎಂಬ ಹೆಸರಿನ ಜೀಬ್ರಾ ಮ್ಯಾನ್, ತನ್ನ ದೇಹದಾದ್ಯಂತ ಜೀಬ್ರಾಗಳಂತಹ ಹಚ್ಚೆಗಳನ್ನು ಹೊಂದಿದ್ದು, ದೇಹದಾದ್ಯಂತ ಬಿಳಿ ಮತ್ತು ಕಪ್ಪು ಪಟ್ಟೆಗಳನ್ನು ಕೂಡ ಹಾಕಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ರೀತಿಯ ಟ್ಯಾಟು ಮೂಲಕ ವಿಭಿನ್ನವಾಗಿ ಜೀವಿಸುವ ಪ್ರವೃತ್ತಿ ಹೊಂದಿದ್ದಾರೆ.