ಮಕ್ಕಳಿಗಾಗಿ ‘ಡಿಜಿಟಲ್‌ ಲಾಕ್‌ಡೌನ್‌’ ಘೋಷಿಸಿದ ಈ ಗ್ರಾಮಸ್ಥರು!

Share the Article

ಇಂದಿನ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಪುಸ್ತಕ ಹಿಡಿಯ ಬೇಕಾದ ಕೈಗಳು ಮೊಬೈಲ್ ಫೋನ್ ಹಿಡಿಯುವಂತೆ ಆಗಿದೆ. ಯಾಕಂದ್ರೆ, ಮೊಬೈಲ್ ಬಳಕೆ ಪ್ರತಿಯೊಬ್ಬರಿಗೂ ತಿಳಿದೇ ಇರಬೇಕು ಎನ್ನುವಂತೆ ಆಗಿದೆ. ಎಷ್ಟರಮಟ್ಟಿಗೆ ಅಂದ್ರೆ, ಓದಿಗಿಂತಲೂ ಅದೇ ಮುಖ್ಯ ಎನ್ನುವಂತೆ. ಅದೆಷ್ಟೋ ವಿದ್ಯಾರ್ಥಿಗಳು ಇದೇ ಕಾರಣಕ್ಕೆ ಓದಿನಿಂದಲೂ ಹಿಂದುಳಿದಿದ್ದಾರೆ.

ಇದಕ್ಕೆಲ್ಲ ಪರಿಹಾರ ಎಂಬಂತೆ ಮಕ್ಕಳಿಗಾಗಿ ‘ಡಿಜಿಟಲ್‌ ಲಾಕ್‌ಡೌನ್‌’ ಘೋಷಿಸಲಾಗಿದೆ. ಹೌದು. ಮಕ್ಕಳನ್ನು ಮೊಬೈಲ್‌ ಬಳಕೆಯಿಂದ ದೂರ ಇರಿಸಿ ಕಲಿಕೆಯತ್ತ ಆಕರ್ಷಿಸಲು ಈ ಗ್ರಾಮದಲ್ಲಿನಿತ್ಯ ಸಂಜೆ 7ರಿಂದ 8.30ರವರೆಗೆ ಮೊಬೈಲ್‌, ಟಿ.ವಿ ಬಳಕೆ ನಿಷೇಧಿಸಲಾಗಿದೆ.

ಇಂತಹದೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್‌ ತಾಲ್ಲೂಕಿನ ಮೋಹಿತೆ ವಡಗಾಂವ ಗ್ರಾಮಸ್ಥರು.’ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಅನಗತ್ಯ ವಾಗಿ ಮೊಬೈಲ್‌ ಬಳಸು ತ್ತಿದ್ದರು. ಸರಿಯಾಗಿ ಅಭ್ಯಸಿಸುತ್ತಿಲ್ಲ ಎಂಬ ದೂರು ಇತ್ತು. ಹೀಗಾಗಿ, ಗ್ರಾಮದ ಹಿರಿಯರೆಲ್ಲ ಸೇರಿ ಚರ್ಚಿಸಿ, ನಿತ್ಯ ಒಂದೂವರೆ ತಾಸು ಮೊಬೈಲ್‌, ಟಿ.ವಿ ಬಳಕೆಗೆ ನಿರ್ಬಂಧ ಹೇರುವ ನಿರ್ಣಯವನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೈಗೊಂಡಿದ್ದಾರೆ. ಜೊತೆಗೆ ವಾರ್ಡ್‌ವಾರು ಸಮಿತಿ ರಚಿಸಿ, ಜನರಲ್ಲಿ ಜಾಗೃತಿ ಮೂಡಿಸಿದೆವು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಮೋಹಿತೆ ಹೇಳಿದ್ದಾರೆ.

ಗ್ರಾಮದ ಜನಸಂಖ್ಯೆ ಸುಮಾರು 3 ಸಾವಿರವಿದ್ದು, 450 ಮಕ್ಕಳು ತಮ್ಮೂರಿನಲ್ಲೇ 1ರಿಂದ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆ.14ರಿಂದ ಹೊಸ ಪದ್ಧತಿ ಜಾರಿಯಾಗಿದ್ದು, ಸಂಜೆ ಹೊತ್ತಿನಲ್ಲಿ ಮಕ್ಕಳು ಮೊಬೈಲ್‌ ಬದಿಗಿರಿಸಿ ಅಭ್ಯಸಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಗ್ರಾಮದೇವರಾದ ಭೈರವನಾಥ ಮಂದಿರದ ಮೇಲೆ ಸೈರನ್‌ ಅಳವಡಿಸಲಾಗಿದೆ. ಸಂಜೆ 7ಕ್ಕೆ ಅದನ್ನು ಬಾರಿಸಿದ ಕೂಡಲೇ ಜನರು ಮೊಬೈಲ್‌ ಬದಿಗಿರಿಸಿ ಮನೆಯಲ್ಲಿ ಟಿ.ವಿ ಬಳಕೆ ನಿಲ್ಲಿಸುತ್ತಾರೆ. ಮಕ್ಕಳೆಲ್ಲ ಮನೆಯಲ್ಲಿ ಅಭ್ಯಾಸ ಮಾಡುತ್ತಾರೆ. ಒಟ್ಟಾರೆ, ಈ ಪದ್ಧತಿಯಿಂದ ಮಕ್ಕಳ ವಿದ್ಯಾಭ್ಯಾಸದಲ್ಲೂ ಸುಧಾರಣೆ ಕಂಡಿದೆ. ಇಂತಹ ಲಾಕ್ ಡೌನ್ ಎಲ್ಲೆಡೆ ಅಳವಡಿಸಿದರೆ ಉತ್ತಮ…

Leave A Reply