ಎಕ್ಸಾಂನಲ್ಲಿ ಒಂದು ಪದ ತಪ್ಪಾಗಿ ಬರೆದ ಕಾರಣ ಶಿಕ್ಷಕನಿಂದ ದಲಿತ ವಿದ್ಯಾರ್ಥಿಗೆ ಥಳಿತ | ಏಟು ತಡೆಯಲಾರದೆ ಬಾಲಕ ಸಾವು |

Share the Article

ಮಕ್ಕಳನ್ನು ಸರಿ ದಾರಿಗೆ ತರಲು ಶಿಕ್ಷಕರು ದಂಡ ಪ್ರಯೋಗ ಮಾಡುವುದು ಸಾಮಾನ್ಯ. ಆದರೆ, ದಂಡಂ ದಶಗುಣಂ ಎಂದು ಸಾಯುವ ಮಟ್ಟಿಗೆ ಥಳಿಸಿದರೆ, ಪೋಷಕರು ಪೋಲಿಸ್ ಮೆಟ್ಟಿಲು ಹತ್ತುವುದರಲ್ಲಿ ಸಂಶಯವಿಲ್ಲ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಶಾಲೆಯ ಶಿಕ್ಷಕ ನೊಬ್ಬನಿಂದ ಥಳಿತಕ್ಕೆ 15 ವರ್ಷದ ದಲಿತ ಬಾಲಕನ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರಪ್ರದೇಶದ, ಅಚಲ್ಡಾ ಪ್ರದೇಶದ ಆದರ್ಶ ಇಂಟರ್‌ ಕಾಲೇಜಿನಲ್ಲಿ ಓದುತ್ತಿದ್ದ, 15 ವರ್ಷದ ದಲಿತ ವಿದ್ಯಾರ್ಥಿ, ನಿಖಿತ್ ದೋಹ್ರೆ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಒಂದು ಪದವನ್ನು ತಪ್ಪಾಗಿ ಬರೆದಿದ್ದಕ್ಕಾಗಿ ಮೇಲ್ಜಾತಿಗೆ ಸೇರಿದ ಶಾಲಾ ಶಿಕ್ಷಕ ಅಶ್ವಿನಿ ಸಿಂಗ್ ಬಾಲಕನನ್ನು ತೀವ್ರವಾಗಿ ಥಳಿಸಿದ್ದಾನೆ. ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಥಳಿಸಿದ ಶಿಕ್ಷಕ ಅಶ್ವಿನಿ ಸಿಂಗ್, ಬಾಲಕನ ಚಿಕಿತ್ಸೆಗೆ ₹ 40,000 ನೀಡಿ , ಕಾನೂನಿನ ಚೌಕಟ್ಟಿನಲ್ಲಿ ತಪ್ಪಿಸಿಕೊಳ್ಳಲು ಊರಿನಿಂದ ಪರಾರಿಯಾಗಿರುವುದಲ್ಲದೆ, ಕರೆಗಳನ್ನು ಕೂಡ ಉತ್ತರಿಸುತ್ತಿಲ್ಲ. ಹೀಗಾಗಿ , ಪೋಷಕರು ಜಾತಿ ನಿಂದನೆ ಜೊತೆಗೆ ಮಗನ ಸಾವಿಗೆ ಕಾರಣರಾದ ಆರೋಪಿಗೆ ಶಿಕ್ಷೆ ಯಾಗಬೇಕೆಂದು ಪೋಲಿಸ್ ಸ್ಟೇಷನ್ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.

ಜಾತಿ ನಿಂದನೆ ಮಾಡಿ ಥಳಿಸಿದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದು, ಆರೋಪಿಯನ್ನು ಬಂಧಿಸಿ, ಶಿಕ್ಷೆ ವಿಧಿಸಲು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದ್ದು, ಕೋಪಗೊಂಡ ಕೆಲವು ಸ್ಥಳೀಯರು ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿರುವುದಲ್ಲದೆ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ .

Leave A Reply