ದಸರಾ ರಜೆ ಮೂರನೇ ಬಾರಿಗೆ ಪರಿಷ್ಕರಣೆ | ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆ.28 ರಿಂದ ರಜೆ ಘೋಷಣೆ

ಮಂಗಳೂರು: ದಸರಾ ರಜೆ ಮೂರನೇ ಬಾರಿಗೆ ಪರಿಷ್ಕರಣೆಗೊಂಡಿದೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಬಾರಿಯ ದಸರಾ ರಜೆ ಮತ್ತೆ ಪರಿಷ್ಕರಣೆಗೊಂಡಿದೆ. ನಿನ್ನೆಯಷ್ಟೇ ಮಂಗಳೂರು ಮಾತ್ರ ಇದ್ದ ರಜೆ ಇವತ್ತು, ಇಡೀ ಜಿಲ್ಲೆಗೆ ಅನ್ವಯಿಸುವಂತೆ ಸೆಪ್ಟೆಂಬರ್ 28 ರಿಂದಲೇ ದಸರಾ ರಜೆ ನಿಗದಿಪಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಇಂದು ಆದೇಶ ಹೊರಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸೆಪ್ಟೆಂಬರ್ 24 ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಗೆ ದಸರಾ ರಜೆ ನೀಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ವಿವೇಚನಾಧಿಕಾರ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಟಿಪ್ಪಣಿ ಬರೆದಿದ್ದರು.

ನಿನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಂಗಳೂರು ತಾಲೂಕಿಗೆ ಮಾತ್ರ ಸೀಮಿತವಾಗಿ ಸೆಪ್ಟೆಂಬರ್ 28 ರಿಂದ ದಸರಾ ರಜೆ ನೀಡಿ ಆದೇಶ ಹೊರಡಿಸಲಾಗಿತ್ತು.

ಆದರೆ ಈ ಗೊಂದಲದಿಂದಾಗಿ ಇಡೀ ಜಿಲ್ಲೆಗೆ ಆದೇಶ ವಿಸ್ತರಣೆ ಮಾಡಬೇಕೆಂಬ ಒತ್ತಾಯ ವ್ಯಕ್ತವಾದ ಕಾರಣ ಇಂದು ದ.ಕ. ಡಿಸಿ ಇಡೀ ಜಿಲ್ಲೆಗೆ ರಜೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ ಅಕ್ಟೋಬರ್ 3 ರಿಂದ ದಸರಾ ರಜೆ ಆರಂಭವಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 4 ದಿನ ಹೆಚ್ಚುವರಿ ರಜೆ ನೀಡಲಾಗಿದೆ.

Leave A Reply

Your email address will not be published.