ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಲು PFI ಸಂಚು: ಇ.ಡಿ ಆರೋಪ
ಇತ್ತೀಚೆಗೆ ದೇಶಾದ್ಯಂತ ಪಿಎಫ್ ಐ ಕಚೇರಿಗಳ ಮೇಲೆ ಎನ್ ಐಎ, ಇ.ಡಿ ದಾಳಿ ನಡೆಸಿದ್ದು ಭಾರೀ ಸಂಚಲನ ಮೂಡಿಸಿದೆ. ಆಘಾತಕಾರಿ ಮಾಹಿತಿಯೊಂದರ ಪ್ರಕಾರ, ಜುಲೈನಲ್ಲಿ ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪಿಎಫ್ ಐ ( PFI) ದಾಳಿ ನಡೆಸಲು ಸಂಚು ರೂಪಿಸಿತ್ತು ಎಂಬುದಾಗಿ ಜಾರಿ ನಿರ್ದೇಶನಾಲಯ ಶನಿವಾರ (ಸೆಪ್ಟೆಂಬರ್ 24) ಆರೋಪ ಮಾಡಿದೆ.
ಅಷ್ಟು ಮಾತ್ರವಲ್ಲದೇ, ಪಾಟ್ನಾದಲ್ಲಿ ದಾಳಿ ನಡೆಸುವ ಉದ್ದೇಶದ ಜೊತೆ ಜೊತೆಗೆನೇ, ಏಕಕಾಲದಲ್ಲಿ ಉತ್ತರಪ್ರದೇಶದ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿ ಕೂಡಾ ದಾಳಿ ನಡೆಸಲು ಮಾರಕ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವುದಾಗಿ ತಿಳಿದು ಬಂದಿದೆ.
ಕೇರಳದಲ್ಲಿ ಗುರುವಾರ ಜಾರಿ ನಿರ್ದೇಶನಾಲಯ ( ED) ದಾಳಿ ನಡೆಸಿದ್ದ ಸಂದರ್ಭದಲ್ಲಿ, ಪಿಎಫ್ ಐ ಸದಸ್ಯ ಶಫೀಖ್ ಪಾಯೆತ್ ಎಂಬಾತನನ್ನು ಬಂಧನ ಮಾಡಲಾಗಿತ್ತು. ಆತ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಹೇಳಿದ್ದಾನೆ. ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾಕ್ಕೆ ಭೇಟಿ ನೀಡಿದ ವೇಳೆ ದಾಳಿ ನಡೆಸಲು ಪಿಎಫ್ ಐ ತರಬೇತಿ ಶಿಬಿರ ನಡೆಸಿತ್ತು ಎಂಬುದಾಗಿ ಹೇಳಿದ್ದಾನೆ ಎಂದು ಇ.ಡಿ ಹೇಳಿದೆ.
ಶಫೀಖ್ ಪಾಯೆತ್ ಈ ಹಿಂದೆ ಕತಾರ್ ನಲ್ಲಿ ಉದ್ಯೋಗ ಮಾಡುತ್ತಿದ್ದಾಗ, ತನ್ನ ಎನ್ ಐಆರ್ ಖಾತೆಯನ್ನು ಅಕ್ರಮವಾಗಿ ಬಳಸಿಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸಲು ವಿದೇಶದಿಂದ ಭಾರತದಲ್ಲಿರುವ ಪಿಎಫ್‌ಐಗೆ ಹಣ ವರ್ಗಾವಣೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ದೂರಿದೆ.
ಫಾಯೆತ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದರಿಂದ ಕಳೆದ ವರ್ಷ ಆತನಿಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು ಎಂದು ಇ.ಡಿ. ತಿಳಿಸಿದೆ.
ಹಾಗೆನೇ ಕೆಲವೇ ವರ್ಷಗಳಲ್ಲಿ ಪಿಎಫ್ ಐ ಖಾತೆಗಳಲ್ಲಿ 120 ಕೋಟಿಗೂ ಅಧಿಕ ಹಣ ಠೇವಣಿಯಾಗಿದೆ. ಭಾರತ ಹಾಗೂ ವಿದೇಶದಿಂದ ಅನುಮಾನಾಸ್ಪದ ಮೂಲಗಳಿಂದ ಪಿಎಫ್ ಐ ಖಾತೆಗಳಿಗೆ ಹಣ ಜಮಾವಣೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.