25 ಕೋಟಿ ಬಂಪರ್ ಗೆದ್ದ ಚಾಲಕನ ಪಾಡು | ಕಣ್ಣೀರಿಡುತ್ತಿರುವ ಕೋಟಿ ಹಣದ ಒಡೆಯ | ಯಾಕಾಗಿ?
ಸರ್ಕಾರದ ಓಣಂ ಬಂಪರ್ ಲಾಟರಿ ಖರೀದಿಸಿದ್ದ ಆಟೋ ಚಾಲಕನಿಗೆ ಬರೋಬ್ಬರಿ 25 ಕೋಟಿ ರೂ. ಜಾಕ್‌ಪಾಟ್ ಹೊಡೆದು, ಧನಲಕ್ಷ್ಮೀ ಒಲಿದ ಖುಷಿಯಲ್ಲಿ ತೇಲಾಡುತ್ತಿದ್ದ, ಶ್ರೀವರಾಹಂನ ಆಟೋ ಚಾಲಕರಾದ ಅನೂಪ್ ರವರಿಗೆ ನೆಮ್ಮದಿ ಕೆಡಿಸುವ ಘಟನೆಗಳು ಜರುಗುತ್ತಿವೆ.
ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಲು ಯೋಚಿಸಿದ್ದ ಅನೂಪ್ ಅದೃಷ್ಟ ಕೈ ಹಿಡಿದ ಬಳಿಕ ಈ ಯೋಚನೆಯಿಂದ ಹಿಂದೆ ಸರಿದಿದ್ದರು. ಆದರೆ, ಇದೀಗ 25ಲಕ್ಷ ಕೈ ಸೇರುವ ಮೊದಲೇ ಮನೆಯಿಂದ ಹೆದರಿ ಓಡಿ ಹೋಗುವ ಪ್ರಮೇಯ ಎದುರಾಗಿದೆ.
ಸಕ್ಕರೆಯ ಕಂಡಾಗ ಇರುವೆಗಳು ಮುತ್ತಿಕ್ಕುವಂತೆ, ಜನರು ಸಾಗರೋಪಾದಿಯಲ್ಲಿ ಅನೂಪ್ ಮನೆಯ ಮುಂದೆ ಬರುತ್ತಿದ್ದು, ಇದೀಗ ಲಾಟರಿ ಯಾಕಾದರೂ ಗೆದ್ದೇನೋ ಎಂಬ ಮನೋಭಾವ ಉಂಟಾಗಿ, ಗೆದ್ದಾಗ ಇದ್ದ ಖುಷಿಯ ಬುಗ್ಗೆ ನೀರಿನ ಮೇಲಿನ ಗುಳ್ಳೆಯಂತಾಗಿಬಿಟ್ಟಿದೆ.
ಈ ನಡುವೆ ಇವರ ಮಗನಿಗೂ ಅರೋಗ್ಯ ಸಮಸ್ಯೆ ಇದ್ದು, ತುಂಬು ಗರ್ಭಿಣಿ ಮಡದಿಯ ಜೊತೆ ಕಾಲಕಳೆಯಲು ಕೂಡ ಆಗದೆ, ಜನರಿಂದ ತಪ್ಪಿಸಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿ, ಸಹೋದರಿ ಸಂಬಂಧಿಕರ ಮನೆಯಲ್ಲಿ ತಂಗುವಂತಾಗಿದೆ.
ಲಾಟರಿ ಹಣ ಕೈ ಸೇರುವ ಮೊದಲೇ, ಹಣದ ಸಹಾಯ ಕೇಳಿಕೊಂಡು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಲಾಟರಿ ಹಣ ಇನ್ನೂ ಬಂದಿಲ್ಲ ಎಂದು ಹೇಳಿದರೂ ಕೂಡ ಯಾರು ನಂಬುತ್ತಿಲ್ಲ ಜೊತೆಗೆ ಮಕ್ಕಳ ಮದುವೆಗೆ ಅಥವಾ ಚಿಕಿತ್ಸೆಗೆ , ಇಲ್ಲವೆ ಹೊಸದೊಂದು ಅಂಗಡಿ ತೆರೆಯಬೇಕು, ಮನೆಕಟ್ಟುತ್ತಿದ್ದೇವೆ ಹೀಗೆ ನಾನಾ ಕಾರಣ ನೀಡಿ ಸಹಾಯಹಸ್ತ ಕೋರಿ ಬರುತ್ತಿದ್ದಾರೆ. ಇದರಿಂದ ಬೇಸತ್ತು ಅನೂಪ್ ಮನೆ ಬದಲಾಯಿಸುವ ಯೋಚನೆಯಲ್ಲಿದ್ದಾರೆ .
ಲಾಟರಿಯಲ್ಲಿ ದೊಡ್ಡ ಮೊತ್ತದ ಬಹುಮಾನ ಗೆದ್ದವರು ಹಣವನ್ನು ಪೋಲು ಮಾಡುವುದನ್ನು ತಪ್ಪಿಸಲು, ಕೇರಳ ಸರ್ಕಾರವು ಹಣ ನಿರ್ವಹಣೆಗಾಗಿ ತರಬೇತಿ ನೀಡುತ್ತದೆ. ಅನೂಪ್ ಅವರು ಕೂಡ ಸದ್ಯದಲ್ಲೇ ಈ ತರಬೇತಿಗೆ ದಾಖಲಾಗಲಿದ್ದು, ಬರುವ ಹಣವನ್ನೂ ಉತ್ತಮ ರೀತಿಯಲ್ಲಿ ವಿನಿಯೋಗ ಮಾಡುವ ಯೋಚನೆಯಲ್ಲಿದ್ದಾರೆ.