NIA ದಾಳಿ ಅಧಿಕೃತ ಮಾಹಿತಿ ಪ್ರಕಟಣೆ | 45 ಮಂದಿಯ ಬಂಧನ
ಕರಾವಳಿ ಹಾಗೂ ಕೇರಳವನ್ನು ಕೇಂದ್ರೀಕರಿಸಿಕೊಂಡು ದೇಶದ ವಿವಿದೆಡೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಚೇರಿಗಳು, ಕಾರ್ಯಕರ್ತರ ಮನೆಗಳ ಮೇಲೆ ಇಂದು ಏಕಕಾಲಕ್ಕೆ ನಡೆಸಿದ ದಾಳಿಗಳ ಕುರಿತು ಎನ್ ಐಎ ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.
ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಹಣ ಸಂದಾಯ, ದ್ವೇಷ ಬಿತ್ತು ಕೆಲಸ, ಕೋಮು ಸೌಹಾರ್ಧತೆ ಕೆಡಿಸುವ ಯತ್ನ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಇಂದು ದೇಶಾದ್ಯಂತ NIA ಸಂಸ್ಥೆ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಸಂಘಟನೆಯ ವಿವಿದೆಡೆಯ ಕಚೇರಿಗಳು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದೆ.
ಕೇರಳ, ಕರ್ನಾಟಕ ಸೇರಿ ಒಟ್ಟು 15 ರಾಜ್ಯಗಳ 93 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ಮಾಡಿದೆ.ಈ ದಾಳಿಯಲ್ಲಿ ಒಟ್ಟು 45 ಮಂದಿಯನ್ನು ಬಂಧಿಸಲಾಗಿದೆ.ಅಲ್ಲದೇ ಅಪಾರ ಪ್ರಮಾಣದ ದಾಖಲೆ, ನಗದು, ಮಾರಾಕಾಸ್ತ್ರಗಳು, ಡಿಜಿಟಲ್ ಸಾಕ್ಷ್ಯಗಳು ವಶ ಪಡಿಸಿಕೊಳ್ಳಲಾಗಿದೆ ಎಂದು NIA ಅಧಿಕೃತ ಪ್ರಕಟಣೆ ಹೊರಡಿಸಿದೆ.
PFI ನಾಯಕರು ಹಾಗೂ ಕಾರ್ಯಕರ್ತರು ದೇಶದಲ್ಲಿನ ಭಯೋತ್ಪಾದನೆ ಚಟುವಟಿಕೆಗಳಿಗೆ ಧನಸಹಾಯ ಮಾಡಿರುವ ಗಂಭೀರ ಆರೋಪ ಈ ಸಂಘಟನೆ ಮೇಲಿದೆ. ಇನ್ನು ಕಾರ್ಯಕರ್ತರಿಗೆ ಸಶಸ್ತ್ರ ತರಬೇತಿ ಆಯೋಜನೆ, ನಿಷೇಧಿತ ಉಗ್ರಗಾಮಿ ಸಂಘಟನೆಗೆ ಜನರನ್ನು ಸೇರಿಸುವ ಯತ್ನ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳು ಹಾಗೂ ಇತರ ಧರ್ಮಗಳ ನಡುವೆ ದ್ವೇಷ ಬಿತ್ತುವ, ಕೋಮು ಸೌಹಾರ್ಧತೆ ಹಾಳುಮಾಡುವ ಕುರಿತು ಪಿಎಫ್‌ಐ ಸಂಘಟನೆ, ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಒಟ್ಟು 5 ಪ್ರಕರಣ ಹಾಗೂ ಆರೋಪಗಳ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡಿಸಿದೆ.
ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಮಣಿಪುರದಲ್ಲಿ ದಾಳಿ ನಡೆಸಲಾಗಿದೆ.
ಕರ್ನಾಟಕದಿಂದ ಅನೀಸ್ ಅಹಮದ್, ಅಪ್ಸರ್ ಪಾಷಾ, ಅಬ್ದುಲ್ ವಾಹಿದ್ ಸೇರ್, ಯಾಸಿರ್ ಅರಾಫತ್, ಮೊಹಮ್ ಶಾಕೀಬ್, ಮೊಹಮ್ಮದ್ ಫಾರೂಕ್ ಊರ್ ರೆಹಮಾನ್ ಹಾಗೂ ಶಾಹಿದ್ ನಾಸೀರ್ ಸೇರಿ 1 ಮಂದಿ ಶಂಕಿತರನ್ನು ಬಂಧಿಸಲಾಗಿದೆ. ಕೇರಳದಲ್ಲಿ 19, ತಮಿಳುನಾಡಿನಲ್ಲಿ 11, ಆಂದ್ರಪ್ರದೇಶದಲ್ಲಿ 4, ರಾಜಾಸ್ಥಾನದಲ್ಲಿ 2, ಉತ್ತರ ಪ್ರದೇಶ ಹಾಗೂ ತೆಲಂಗಾಣ ದಲ್ಲಿ ತಲಾ ಒರ್ವ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.