ಕುಕ್ಕೇ ಸುಬ್ರಹ್ಮಣ್ಯ: ಅಚ್ಚರಿಗೆ ಕಾರಣವಾಯಿತು ಕೊರಗಜ್ಜನ ಕಟ್ಟೆಯಲ್ಲಿ ನಡೆದ ಘಟನೆ!! ವೀಳ್ಯದೆಲೆಯಲ್ಲಿ ಮೂಡಿದ ಬೇರು!?
ಸುಬ್ರಹ್ಮಣ್ಯ: ತುಳುನಾಡಿನ ಅಪಾರ ನಂಬಿಕೆಯ ಕಾರ್ಣಿಕ ದೈವ ಕೊರಗಜ್ಜನ ಮಹಿಮೆ, ಪವಾಡ,ಕಾರ್ಣಿಕ ಹೆಚ್ಚುತ್ತಲೇ ಇದ್ದು, ಈ ನಡುವೆ ಕುಕ್ಕೇ ಸುಬ್ರಹ್ಮಣ್ಯದ ಕೊರಗಜ್ಜನ ಕಟ್ಟೆಯಲ್ಲಿ ಕುತೂಹಲವೊಂದು ಕಂಡು ಬಂದಿದ್ದು,ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ದೈವದ ಮೇಲಿನ ನಂಬಿಕೆ ಹೆಚ್ಚಾಗಿದೆ.
ಕುಕ್ಕೇ ಸುಬ್ರಮಣ್ಯ ಸಮೀಪದ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಎಂಬಲ್ಲಿನ ಅಜ್ಜನ ಕಟ್ಟೆಯಲ್ಲಿ ವಿಸ್ಮಯ ನಡೆದಿದ್ದು, ಕಟ್ಟೆಯಲ್ಲಿ ಇರಿಸಲಾಗಿದ್ದ ವೀಳ್ಯದೆಲೆ ವಾರಗಳು ಉರುಳಿದರೂ ಇನ್ನೂ ಹಸುರಾಗಿಯೇ ಇದ್ದು, ಅಲ್ಲದೇ ಎಲೆಯಲ್ಲಿ ಬೇರು ಮೂಡಿ ಅಚ್ಚರಿಗೆ ಕಾರಣವಾಗಿದೆ.
ಪ್ರತೀ ಸಂಕ್ರಾಂತಿಗೆ ಇಲ್ಲಿ ಅಜ್ಜನಿಗೆ ಹರಕೆ ಸೇವೆ ನಡೆಯುತ್ತಿದ್ದು, ಪ್ರತೀ ಬಾರಿಯೂ ಹರಕೆಗಳು ಸಂದಾಯವಾಗುತ್ತಿತ್ತು. ಅಂತೆಯೇ ವೀಳ್ಯದೆಲೆ ಹರಕೆಯಾಗಿ ಸಮರ್ಪಣೆಯಾಗಿದ್ದು,ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಹರಕೆ ಕಟ್ಟೆಯಲ್ಲಿ ವೀಳ್ಯದ ಎಲೆ ಇಟ್ಟು ಹರಕೆ ಹೇಳಿಕೊಳ್ಳಲಾಗಿತ್ತು.
ಸಾಮಾನ್ಯವಾಗಿ ಒಂದು ವಾರದಲ್ಲಿ ಎಲೆಯು ಬಾಡಿಹೋಗುತ್ತದೆ. ಆದರೆ ಇಲ್ಲಿ ಹರಕೆಯಾಗಿ ಸಂದಾಯವಾದ ಎಲೆಯು ವಾರಗಳು ಉರುಳಿದರೂ ಬಾಡದೆ ಹಸುರಾಗಿಯೇ ಇತ್ತು.ಇದರಿಂದ ಜ್ಯೋತಿಷ್ಯರ ಮೊರೆ ಹೋದಾಗ ಮಗು ಹುಷಾರಾಗಿರುವುದು ತಿಳಿದುಬರುತ್ತದೆ.ಇದರಿಂದಾಗಿ ವೀಳ್ಯದೆಲೆ ಬೇರು ಬಿಟ್ಟಿದ್ದು, ಹೂವು ಕುಂಡದಲ್ಲಿ ಇರಿಸಲಾಗಿರುವ ಎಲೆಯು ಹಸಿರಾಗಿಯೇ ಇದೆ.
ಸದ್ಯ ಕೊರಗಜ್ಜನ ಕಾರ್ಣಿಕ, ಅಚ್ಚರಿ, ಕುತೂಹಲ ಎಲ್ಲೆಡೆ ಸುದ್ದಿಯಾಗಿದ್ದು, ಅಜ್ಜನ ಮಹಿಮೆ-ಭಕ್ತಿ ಹೆಚ್ಚಿದೆ.