ಮಂಗಳೂರು: ಕೈತೋಟ ನೀಡಿತು ಭರ್ಜರಿ ಕೊಡುಗೆ!!ಅಡಿಕೆ ಮಾರಿದ ಹಣದಿಂದ ಸರ್ಕಾರಿ ಶಾಲೆಗೆ ಬಂತು ಶಾಲಾ ಬಸ್!!
ಬಂಟ್ವಾಳ: ಇಲ್ಲಿನ ಸರ್ಕಾರಿ ಶಾಲೆಯೊಂದರ ಕೈತೋಟದಲ್ಲಿ ಬೆಳೆದ ಅಡಿಕೆ ಮಾರಿ ಬಂದ ಹಣದಿಂದಲೇ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಹೊಸ ಯೋಜನೆಯೊಂದು ರೂಪುಗೊಂಡು ಯಶಸ್ವಿಯಾಗಿದ್ದು, ಪೋಷಕರ, ಶಿಕ್ಷಕರ ಸಹಿತ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಹೌದು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಯೊಂದು ಈ ಮೊದಲು ಕೈತೋಟದಿಂದಲೇ ಪ್ರಸಿದ್ಧಿ ಪಡೆದಿತ್ತು. ಸದ್ಯ ಕೈತೋಟ ನೀಡಿದ ಫಲದಿಂದ ಶಾಲಾ ಮಕ್ಕಳಿಗೆ ಬಸ್ ಖರೀದಿಸಿ ಮಾಡಿ ಮತ್ತೊಮ್ಮೆ ಸುದ್ದಿಯಾಗಿದೆ.
ತಾಲೂಕಿನ ಮಿತ್ತೂರಿನ ಸರ್ಕಾರಿ ಶಾಲೆ ಇದಾಗಿದ್ದು, ಪ್ರಸಕ್ತ ವರ್ಷದಲ್ಲಿ ಇಲ್ಲಿ ಸುಮಾರು 118 ಮಕ್ಕಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ.ಈ ಶಾಲೆಯ ಕೈತೋಟದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಶ್ರಮದಿಂದ ಅಡಿಕೆ ತೋಟ ಬೆಳೆದಿದ್ದು, ಬೆಳೆದ ಬೆಳೆ ಫಲ ನೀಡಿದ ಪರಿಣಾಮವಾಗಿ ಶಾಲೆಗೆ ಬಸ್ಸು ಖರೀದಿಸಲಾಗಿದೆ.
ಈ ವರೆಗೆ ಆಟೋ, ಜೀಪು ಮುಂತಾದವುಗಳಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಶಾಲಾ ಬಸ್ಸಿನಲ್ಲೇ ಬರಲಿದ್ದು, ಅದರ ಖರ್ಚು ವೆಚ್ಚಗಳನ್ನು ಮಕ್ಕಳ ಪೋಷಕರೇ ನಿಭಾಯಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.