ಪ್ರತಿ ವರ್ಷ 5 ಲಕ್ಷ ಅಪಘಾತದಿಂದ 3 ಲಕ್ಷ ಮಂದಿ ಸಾವು : ದೇಶದ ಜಿಡಿಪಿಗೆ ಬರೊಬ್ಬರಿ 3 % ನಷ್ಟ – ಹೆದ್ದಾರಿ ಆಡಿಟ್ ನಡೆಸಲು ಗಡ್ಕರಿ ಸೂಚನೆ

ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿನಂತೆ ವಾಹನಗಳನ್ನು ವೇಗವಾಗಿ ಚಾಲನೆ ಮಾಡುವವರೇ ಹೆಚ್ಚು. ಇದರಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ ಕನಿಷ್ಠ 5 ಲಕ್ಷ ಅಪಘಾತಗಳು ವರದಿಯಾಗುತ್ತಿದ್ದು, ಅದರಲ್ಲಿ 3 ಲಕ್ಷ ಮಂದಿ ಸಾವನ್ನಪ್ಪುತ್ತಿರುವುದು ಆಯಾ ಕುಟುಂಬಕ್ಕೆ ಆಗುತ್ತಿರುವ ದೊಡ್ಡ ನಷ್ಟ.ಈ ನಷ್ಟವು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗಿರದೆ, ದೇಶದ ಜಿಡಿಪಿಗೆ ಕೂಡಾ ದೊಡ್ಡ ನಷ್ಟವನ್ನು ಉಂಟುಮಾಡುತ್ತಿದೆ. ಜಿಡಿಪಿಗೆ ಶೇ 3 ರಷ್ಟು ನಷ್ಟ ಉಂಟು ಮಾಡುತ್ತಿದ್ದು, ರಾಜ್ಯಗಳು ಹೆದ್ದಾರಿಗಳಲ್ಲಿನ ಅಪಘಾತಗಳ ಲೆಕ್ಕಪರಿಶೋಧನೆ ನಡೆಸುವಂತೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ.

 

ಬೆಂಗಳೂರಿನಲ್ಲಿ ನಡೆದ ಸಾರಿಗೆ ಅಭಿವೃದ್ಧಿ ಮಂಡಳಿಯ 41ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೆಕ್ಕಪರಿಶೋಧನೆ ನಡೆಸಲು ದುಬಾರಿ ವೆಚ್ಚವಾಗಬಹುದು. ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಂತ್ರಿಕ ಸಂಸ್ಥೆಗಳಲ್ಲಿನ ಅಧ್ಯಾಪನ ವರ್ಗದ ಪರಿಣತಿಯನ್ನು ಬಳಸಿಕೊಳ್ಳಬಹುದು. ಹಾಗೂ ಡೇಟಾ ಸಂಗ್ರಹಿಸಲು ವಿದ್ಯಾರ್ಥಿಗಳನ್ನು ಸ್ಟೈಫಂಡ್ ಆಧಾರದ ಮೇಲೆ ನಿಯೋಜಿಯಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಈ ರೀತಿಯ ಕ್ರಮ ತೆಗೆದುಕೊಳ್ಳುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯವಾಗಲಿದೆ ಎಂದವರು ಮನವಿ ಮಾಡಿದ್ದಾರೆ.

ಮಾಲಿನ್ಯವನ್ನು ತಡೆಗಟ್ಟಲು ಹೊಸ ನೀತಿಯನ್ನು ತರಲು, ವಿಶೇಷವಾಗಿ ನಗರಗಳಲ್ಲಿ ವಾಹನ ಚಾಲಕರಿಂದ ಅನಗತ್ಯ ಹಾರ್ನ ನಿಂದಾಗಿ ಅತಿರೇಕವಾಗಿರುವ ಶಬ್ದಮಾಲಿನ್ಯ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 15 ದಿನಗಳಲ್ಲಿ ಎಲ್ಲಾ ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳ ಸಭೆಯನ್ನು ನಡೆಸುವುದಾಗಿ ಗಡ್ಕರಿ ಹೇಳಿದ್ದಾರೆ.

ದೇಶದಲ್ಲಿ ಒಂದು ಕೋಟಿ ಜನರು ಹಲವು ವರ್ಷಗಳ ಕಾಲ ತಮ್ಮ ಕೈಯಿಂದ ಸೈಕಲ್ ರಿಕ್ಷಾಗಳಲ್ಲಿ ಜನರನ್ನು ಸಾಗಿಸುವ ಅಮಾನವೀಯ ವೃತ್ತಿಯಲ್ಲಿ ತೊಡಗಿದ್ದರು. ಅವರಲ್ಲಿ 70 ಲಕ್ಷ ಮಂದಿ ಯಾಂತ್ರೀಕೃತ ಇ-ರಿಕ್ಷಾ ಮತ್ತು ಇ-ಕಾರ್ಟ್‌ಗಳಿಗೆ ಬದಲಾಗಿದ್ದಾರೆ. ಇದು ನನ್ನ ಜೀವನದ ಶ್ರೇಷ್ಠ ಸಾಧನೆಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಗಡ್ಕರಿಯವರು ವಾಹನ ಅಪಘಾತ ತಡೆ, ಅಪಘಾತ ಆದಾಗ ಜೀವರಕ್ಷಕವಾಗಿ ಕೆಲಸಮಾಡುವ ಸೀಟ್ ಬೆಲ್ಟ್ ಬಳಸುವ ಅಗತ್ಯ ಮತ್ತು ಒಟ್ಟಾರೆ ರೋಡ್ ಸೇಫ್ಟಿಯ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದು, ಅದು ಜನಸಾಮಾನ್ಯರ ಕೈಲಿಯಲ್ಲಿ ವ್ಯಾಪಕ ಶ್ಲಾಘನೆಗೆ ಗುರಿಯಾಗಿದೆ.

Leave A Reply

Your email address will not be published.