ಮಂಗಳೂರು:ಇಷ್ಟವಿಲ್ಲದ ವರನ ತಾಳಿಗೆ ಕೊರಳೊಡ್ಡಿದ ಯುವತಿಯ ಅಂತ್ಯ!! ಮದುವೆಯಾದ 15 ದಿನಕ್ಕೆ ಆತ್ಮಹತ್ಯೆ

Share the Article

ಮಂಗಳೂರು: ಯುವತಿಯ ಇಚ್ಛೆಗೆ ವಿರುದ್ಧವಾಗಿ ಆಕೆಗೆ ಒಲ್ಲದ ವರನೊಂದಿಗೆ ವಿವಾಹ ನಡೆಸಿದ ಹಿನ್ನೆಲೆಯಲ್ಲಿ, ಮದುವೆಯಾಗಿ 15 ದಿನಕ್ಕೇ ನವವಿವಾಹಿತೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಮಂಗಳೂರು ಹೊರವಲಯದ ಕೋಡಿಕಲ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಅಬ್ಲಮೊಗರು ಕೊಟ್ರಗುತ್ತು ನಿವಾಸಿ ರಶ್ಮಿ ವಿಶ್ವಕರ್ಮ (24) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಯುವತಿ ರಶ್ಮಿಯನ್ನು ಆಗಸ್ಟ್ 21ರಂದು ಮೂಲತಃ ಮಂಗಳೂರು ಕೈಕಂಬ ಗಂಜಿಮಠ ನಿವಾಸಿ, ದುಬೈ ನಲ್ಲಿ ಉದ್ಯೋಗದಲ್ಲಿದ್ದು ಅಲ್ಲೇ ನೆಲೆಸಿರುವ ಸಂದೀಪ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಅದ್ದೂರಿಯಾಗಿ ನಡೆದ ವಿವಾಹ ಕಾರ್ಯದಲ್ಲಿ ಹಲವಾರು ಗಣ್ಯರು, ಅತಿಥಿಗಳು ಪಾಲ್ಗೊಂಡಿದ್ದು, ವಧು ವರರನ್ನು ಹಾರೈಸಿ, ಆಶೀರ್ವದಿಸಿದ್ದರು.

ಆದರೆ ವಿವಾಹ ನಿಶ್ಚಯವಾದಾಗಿನಿಂದ ರಶ್ಮಿ ಮುನಿಸಿಕೊಂಡಿದ್ದು, ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿಸಿಕೊಂಡು ಬಳಿಕ ಗಂಡನ ಮನೆಗೆ ಹೋಗದೇ ತವರು ಮನೆಯಲ್ಲೇ ಇದ್ದಳು ಎನ್ನಲಾಗಿದೆ. ಸೆ.03 ರಂದು ಕೋಡಿಕಲ್ ನಲ್ಲಿರುವ ತನ್ನ ಅಕ್ಕನ ಮನೆಗೆ ಔತಣ ಕೂಟಕ್ಕೆ ತೆರಳಿದ್ದು,ಅಲ್ಲಿ ಇಲಿ ಪಾಷಾಣ ಸೇವಿಸಿದ್ದೇನೆ ಎಂದಿದ್ದಾಳೆ ಎನ್ನಲಾಗಿದೆ.

ಕೂಡಲೇ ಮನೆಮಂದಿ ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply