ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಚಿತ ವಿದ್ಯುತ್ ಯೋಜನೆ : ಆದೇಶ ಹಿಂಪಡೆದ ಸರಕಾರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ‘ಅಮೃತ ಜ್ಯೋತಿ’ ಯೋಜನೆಯಡಿ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಒದಗಿಸುವ ಕಾರ್ಯಕ್ರಮದ ಮಾರ್ಗಸೂಚಿ ಪರಿಷ್ಕರಿಸಲು ಇಂಧನ ಇಲಾಖೆ ನಿರ್ಧರಿಸಿದೆ.

 

ಈ ಯೋಜನೆಯ ಜಾರಿಗೆ ಮೇ 18 ರಂದು ಆದೇಶ ಹೊರಡಿಸಲಾಗಿತ್ತು. ಫಲಾನುಭವಿಗಳ ಅರ್ಹತೆ, ಮಂಜೂರಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳುಳ್ಳ ಸುತ್ತೋಲೆಯನ್ನು ಆಗಸ್ಟ್‌ 24 ರಂದು ನೀಡಲಾಗಿತ್ತು. ಆ. 24 ರ ಸುತ್ತೋಲೆಯನ್ನು ಹಿಂಪಡೆದು ಶನಿವಾರ (ಸೆಪ್ಟೆಂಬರ್‌ 3) ಆದೇಶ ಹೊರಡಿಸಲಾಗಿದೆ.

ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌ ಪೂರೈಸುವ ಯೋಜನೆಯನ್ನೇ ಕೈಬಿಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌, ‘ಯೋಜನೆ ಅನುಷ್ಠಾನದ ಆದೇಶ ರದ್ದಾಗಿಲ್ಲ. ಮಾರ್ಗಸೂಚಿಗಳನ್ನು ನೀಡಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಕೆಲವು ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕಾಗಿ ಸುತ್ತೋಲೆ ರದ್ದು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.