ಅಮೇರಿಕಾದಲ್ಲಿ ಭಾರತೀಯನಿಂದಲೇ ಭಾರತೀಯನ ನಿಂದನೆ
ಅಮೆರಿಕದಲ್ಲಿ ಮತ್ತೆ ಭಾರತೀಯರ ಮೇಲೆ ಜನಾಂಗೀಯ ನಿಂದನೆಗಳು ಹೆಚ್ಚುತ್ತಿವೆ. ಮೊನ್ನೆಯಷ್ಟೇ ನಾಲ್ವರು ಭಾರತೀಯ ಮಹಿಳೆಯರ ಮೇಲೆ ಮೆಕ್ಸಿಕನ್ ಮಹಿಳೆ ದಾಳಿ ನಡೆಸಿದ್ದರು. ಆದ್ರೆ ಈ ಬಾರಿ ಯಾರೋ ಬೇರೆ ದೇಶದವರು ಈ ಕೆಲಸ ಮಾಡಿದ್ದಲ್ಲ. ಬದಲಾಗಿ ಭಾರತೀಯ ಮೂಲದ ಹಿನ್ನೆಲೆಯನ್ನ ಹೊಂದಿರೋ ಸಿಖ್ ವ್ಯಕ್ತಿಯೊಬ್ಬ, ಹಿಂದೂ ಸಮುದಾಯದ ವ್ಯಕ್ತಿಯನ್ನು ನಿಂದಿಸಿದ್ದಾನೆ.
ಇದೀಗ ಕ್ಯಾಲಿಫೋರ್ನಿಯಾದಲ್ಲಿ ಪಂಜಾಬ್ ಮೂಲದ ಸಿಂಗ್ ತೆಜಿಂದರ್ ಅನ್ನೋ ಈ ಸಿಖ್ ವ್ಯಕ್ತಿ ತಮಿಳುನಾಡು ಮೂಲದ ಕೃಷ್ಣನ್ ಜಯರಾಮನ್ ಎಂಬವರನ್ನು ಉದ್ದೇಶಿಸಿ ಜನಾಂಗೀಯ ನಿಂದನೆ ಮಾಡಿದ್ದಾನೆ.
ನೀನು ಹಿಂದೂ ಅಲ್ವಾ.. ಗೋಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ..? ನಿಮ್ಮಂಥರವರಿಂದ್ಲೇ ಭಾರತೀಯರನ್ನು ಕೆಟ್ಟದಾಗಿ ನೋಡಲಾಗ್ತಿದೆ. ನೀನು ಅಸಹ್ಯವಾಗಿ ಇದ್ದೀಯಾ.. ಇನ್ಮುಂದೆ ಈ ರೀತಿ ಹೊರಗೆಲ್ಲೂ ಬರ್ಬೇಡ’ ಎಂದೆಲ್ಲಾ ನಿಂದಿಸಿದ್ದಾನೆ. ಅಲ್ಲದೇ, ಎರಡು ಬಾರಿ ಕೃಷ್ಣನ್ ಜಯರಾಮನ್ ಮುಖಕ್ಕೆ ಉಗುಳಿ ಉದ್ಧಟತನ ಮೆರೆದಿದ್ದಾನೆ.
ನೀವು ನಾಯಿಗಳು. ಮತ್ತೆ ಹೊರಗೆ ಬರಲೇಬೇಡಿ ಅಂತ ಇನ್ನೂ ಅನೇಕ ರೀತಿಯಲ್ಲಿ ಬಳಕೆ ಮಾಡೋಕೆ ಸಾಧ್ಯವಾಗದ ಪದಗಳಲ್ಲಿ ಬೈದಿದ್ದಾನೆ. ಇದನ್ನೆಲ್ಲಾ ಜಯರಾಮ್, ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಇದಕ್ಕೆ ಈಗ ಭಾರಿ ಆಕ್ರೋಶ ಕೇಳಿ ಬಂದಿದ್ದು ವ್ಯಕ್ತಿಯ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ.
ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಆಗಸ್ಟ್ 21 ಈ ಘಟನೆ ನಡೆದಿದೆ. ಇದಾದ ಬಳಿಕ ಅಲ್ಲಿನ ಪೊಲೀಸರು ಆತನನ್ನ ವಶಕ್ಕೆ ಪಡೆದು ಡ್ರಿಲ್ ಮಾಡ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಜಯರಾಮ್ ಫುಡ್ ಪಿಕಪ್ ಮಾಡೋಕೆ ಹೋದಾಗ ಅಲ್ಲಿದ್ದ ವ್ಯಕ್ತಿ ನನ್ನ ಮೇಲೆ ಈ ರೀತಿ ಮಾಡಿದ್ದಾನೆ. ಆತ ಹಲ್ಲೆ ಮಾಡೋಕೂ ಕೂಡ ಮುಂದಾಗಿದ್ದ. ನನಗೆ ತುಂಬಾ ಭಯವಾಗಿತ್ತು ಅಂತ ಆತಂಕ ಹೇಳಿಕೊಂಡಿದ್ದಾರೆ. ಇದು ಕಳೆದ ಒಂದೇ ವಾರದಲ್ಲಿ ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದ 2ನೇ ಘಟನೆಯಾಗಿದೆ.