ಗೂಗಲ್ ಮ್ಯಾಪ್ ಅವಾಂತರದಿಂದ ಪ್ರವಾಹದಲ್ಲಿ ಸಿಲುಕಿದ ಕಾರು!
ಇಂದು ಹೆಚ್ಚಿನವರು ಪ್ರಯಾಣಿಸುವಾಗ ಬಳಸುವ ಆಪ್ ಎಂದರೆ ಗೂಗಲ್ ಮ್ಯಾಪ್. ಹೆಚ್ಚಿನವರು ಮ್ಯಾಪ್ ಬಳಸಿಕೊಂಡೆ ಹೊಸ-ಹೊಸ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದ್ರೆ, ಈ ಮ್ಯಾಪ್ ಮಾಡುತ್ತಿರುವ ಅವಾಂತರ ಒಂದೋ ಎರಡೋ.. ಇದನ್ನ ನಂಬಿದವರಿಗೆ ಚೊಂಬೇ ಗತಿ ಅನ್ನೋ ರೀತಿ ಆಗಿದೆ.
ಹೌದು. ಗೂಗಪ್ಮ್ಯಾಪ್ನಿಂದ ಅಡ್ಡದಾರಿ ಹಿಡಿದು ಅದೆಷ್ಟೋ ಜನ ಜೀವ ಕಳೆದುಕೊಂಡಿರುವ ಘಟನೆಗಳ ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಬೆಂಗಳೂರಿನ ಸರ್ಜಾಪುರದ ಕುಟುಂಬವೊಂದು ಗೂಗಪ್ಮ್ಯಾಪ್ನಿಂದಾಗಿ ಜೀವ ಕಳೆದುಕೊಳ್ಳುವ ಮಟ್ಟಿಗೆ ಹೋಗಿ ಅದೃಷ್ಟವಶಾತ್ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.
ರಾಜೇಶ್ ಅವರು ಹೊಸೂರಿಗೆ ಹೋಗಿ ಕುಟುಂಬ ಸಹಿತ ಕಾರಿನಲ್ಲಿ ವಾಪಸ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಹಲವೆಡೆ ರಸ್ತೆ ಜಲಾವೃತಗೊಂಡಿದೆ. ಅದರಲ್ಲೂ ಹೊಸೂರು ಬಳಿಯ ಬಾಗೇಪಲ್ಲಿ ಭೂಸೇತುವೆಯಲ್ಲಿ 5 ಅಡಿಗೂ ಹೆಚ್ಚು ನೀರು ನಿಂತಿದೆ. ಇದರಿಂದಾಗಿ ದಾರಿ ಹೇಗೆಂದು ರಾಜೇಶ್ ಅವರಿಗೆ ತಿಳಿಯಲಿಲ್ಲ.
ಆಗ ಅವರು ಗೂಗಲ್ ಮ್ಯಾಪ್ ಮೊರೆ ಹೋಗಿದ್ದಾರೆ. ಅದು ಮುಂದೆ ಹೋಗಿ ಎಂದು ಸಿಗ್ನಲ್ ಮೂಲಕ ಹೇಳಿದೆ.ರಾಜೇಶ್ ಅವರು ಕತ್ತಲಲ್ಲಿ ದಾರಿ ಗೊತ್ತಾಗದ ಕಾರಣ, ಮ್ಯಾಪ್ ಹೇಳಿದಂತೆ ಹೋಗಿದ್ದಾರೆ. ಇದರಿಂದ ಅವರು ಪ್ರವಾಹದ ನೀರಿನಲ್ಲಿ ಸಿಲುಕಿದ್ದಾರೆ. ಆದರೆ, ನಿಜವಾಗಿ ಹೇಳುವುದಾದರೆ ಇಲ್ಲಿ ಗೂಗಲ್ ಮ್ಯಾಪ್ ದು ಏನೂ ತಪ್ಪಿಲ್ಲ. ಏಕೆಂದರೆ, ಅದು ಸರಿಯಾದ ದಾರಿಯನ್ನೇ ಹೇಳಿದೆ. ಅಲ್ಲಿ ಪ್ರವಾಹದ ನೀರು ತುಂಬಿ ಹರಿಯುತ್ತಿರುವುದು ಮ್ಯಾಪ್ಗೆ ಹೇಗೆ ತಿಳಿಯಬೇಕು ಅಲ್ಲವೇ?
ಆದರೆ, ಮುಂದಾಲೋಚನೆಯಿಂದ ಅವರು ತನ್ನ ಪ್ರಾಣವನ್ನೂ ಉಳಿಸಿಕೊಂಡಿದ್ದಾರೆ. ಕಾರು ನೀರೊಳಗೆ ಬೀಳುತ್ತಿರುವುದು ಗೊತ್ತಾಗುತ್ತಲೇ ಅವರು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡದಿಂದಾಗಿ ಅವರು ಜೀವಸಹಿತ ಪಾರಾಗಿದ್ದಾರೆ. ರಕ್ಷಣಾ ತಂಡವು ಭಾರಿ ವಾಹನಗಳ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಿ ಕಾರನ್ನೂ ಹೊರತೆಗೆದಿದ್ದಾರೆ.