ಬೆಳ್ತಂಗಡಿಯಂತಹ ಪೇಟೆಗೂ ಕಾಲಿಡಲಿದೆ ಮಿನಿ ವಿಮಾನ ನಿಲ್ದಾಣ , 100 ಕೋಟಿ ಬಿಡುಗಡೆ!
ಬೆಳ್ತಂಗಡಿ : ಜನತೆಯ ಕನಸು ನನಸಾಗುವತ್ತಾ ಹೆಜ್ಜೆ ಇಟ್ಟಿದೆ. ಹೌದು. ತಾಲೂಕಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಗ್ರೀನ್ ಸಿಗ್ನಲ್ ದೊರಕಿದೆ.
ಕೇಂದ್ರ ಸರ್ಕಾರದ ‘ಉಡಾನ್ ‘ ಯೋಜನೆಯಡಿ ಬೆಳ್ತಂಗಡಿಗೆ ಲಘು ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಯೋಜಿತ ಯೋಜನೆಗೆ ವಿವರವಾದ ಯೋಜನಾ ವರದಿ ತಯಾರಿಸಲು ಮಾನ್ಯ ವಸತಿ ಹಾಗೂ ಮೂಲ ಸೌಲಭ್ಯ ಇಲಾಖೆ ಸಚಿವರಾದ ವಿ. ಸೋಮಣ್ಣರವರು ಅನುಮೋದನೆ ನೀಡಿದ್ದಾರೆ.
ರಾಜ್ಯದಲ್ಲಿ ಅತ್ಯಧಿಕ ಭಕ್ತರು ಸಂದರ್ಶಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ಕುರಿತು ಸಿಎಂ ಹಾಗೂ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು. ಅದಕ್ಕೆ ಬೇಕಾಗುವ 100 ಎಕರೆ ಜಾಗ ಹೆಲಿಪ್ಯಾಡ್ ಗುರುತಿಸಲು ಮುಂದಿನ ವಾರ ಅಧಿಕಾರಿಗಳಿಗೆ ಸೂಚಿಸಲಾಗುವುದು. 100 ಕೋಟಿ ರೂ. ವೆಚ್ಚದ ಈ ಲಘು ಏರ್‌ಟ್ ನಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಯೋಜನೆಯಿದೆ. ಪ್ರಥಮ ಹಂತದಲ್ಲಿ 100 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ ಎಂದರು.
ಬೆಳ್ತಂಗಡಿಯಲ್ಲಿ ಶನಿವಾರ 1500 ಫಲಾನುಭವಿಗಳಿಗೆ ವಸತಿ ಆದೇಶ ಪತ್ರ ವಿತರಣೆಗೊಳಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಭಾಗದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳು ಏಕ ಕಾಲದಲ್ಲಿ ಲ್ಯಾಂಡಿಂಗ್ ಆಗಲು ಅವಕಾಶವಿರುವ ಲಘು ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದಿದ್ದಾರೆ.
ರಾಜ್ಯಸಭಾ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಶಾಸಕ ಹರೀಶ್ ಪೂಂಜಾಅವರ ಕೋರಿಕೆಯಂತೆ ಪ್ರಸ್ತಾವಿತ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ ಎಂದು ಸೋಮಣ್ಣರವರು ತಿಳಿಸಿದ್ದಾರೆ.