ಭೀಕರ ಪ್ರವಾಹಕ್ಕೆ ತತ್ತರಿಸಿದ ಪಾಕ್ ; ತುರ್ತು ಪರಿಸ್ಥಿತಿ ಘೋಷಣೆ
ಪಾಕಿಸ್ತಾನದ ಭೀಕರ ಮಳೆ, ಪ್ರವಾಹಕ್ಕೆ ಇದುವರೆಗೆ 343 ಮಕ್ಕಳು ಸೇರಿದಂತೆ 937 ಜನರು ಸಾವನ್ನಪ್ಪಿದ್ದಾರೆ. ಇದೀಗ ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಜೂನ್ 14 ರಿಂದ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಇಲ್ಲಿಯವರೆಗೆ ಸಿಂಧ್ ಪ್ರಾಂತ್ಯದಲ್ಲಿ 306 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಲೂಚಿಸ್ತಾನದಲ್ಲಿ 234, ಖೈಬರ್ ಪಂಖ್ತುಂಖ್ವಾದಲ್ಲಿ 185 ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ 165 ಜನರು ಸಾವನ್ನಪ್ಪಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಸುಮಾರು 3 ಕೋಟಿ ಜನರು ನಿರಾಶ್ರಿತಾಗಿದ್ದಾರೆ ಎಂದು ವರದಿಯಾಗಿದೆ.
ಭೀಕರ ಪ್ರವಾಹದ ಹಿನ್ನೆಲೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರಿಫ್ ವಾರ್ ರೂಮ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದು ದೇಶಾದ್ಯಂತ ಪ್ರವಾಹದಿಂದ ನಲುಗಿರುವ ಜನರಿಗೆ ಪರಿಹಾರ ನೀಡುವ ಕಾರ್ಯ ಮಾಡುತ್ತದೆ ಎನ್ನಲಾಗಿದೆ.
ಸೆನೆಟರ್ ಪ್ರಕಾರ, ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ದೇಶದ ವಿವಿಧ ಪ್ರದೇಶಗಳಲ್ಲಿ ಸೇತುವೆ ಸೇರಿದಂತೆ ಸಂಪರ್ಕ ಮೂಲಸೌಕರ್ಯಗಳೇ ಕೊಚ್ಚಿ ಹೋಗಿವೆ. ಸುಮಾರು 3 ಕೋಟಿ ಜನರು ಆಶ್ರಯ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಆಹಾರವಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.