ಉಡುಪಿ:ಮಗು ಹೆತ್ತ ಖುಷಿಯನ್ನು ಕಸಿದ ಜವರಾಯ!! ಪ್ರೀತಿಸಿ ಮದುವೆಯಾದ ತಪ್ಪಿಗೆ ಅನಾಥರಾದ ತಾಯಿ ಮಗು
ಉಡುಪಿ: ಪ್ರೀತಿಸಿ ವಿವಾಹವಾಗಿದ್ದ ಆಕೆಗೆ ಹೆರಿಗೆಯಾಗಿ ಇನ್ನೂ 20 ದಿನ ತುಂಬಿಲ್ಲ. ಅದಾಗಲೇ ಆಕೆಯ ಪತಿ ಅಕಾಲಿಕ ಮರಣಹೊಂದಿದ್ದು ಪತಿಯ ಅಗಲಿಕೆಯ ನಡುವೆ ಪತಿ ಮನೆಯವರು ಮಗು ಸಹಿತ ಸೊಸೆಯನ್ನು ಮನೆಯಿಂದ ಹೊರದಬ್ಬಿದ ಪರಿಣಾಮ ಆಕೆಗೆ ಇದೀಗ ಸಮಾಜ ಸೇವಕರೊಬ್ಬರು ಆಶ್ರಯ ಕಲ್ಪಿಸಿದ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಘಟನಾ ವಿವರ:ಮೂಲತಃ ಬಾದಾಮಿಯಾವರಾದ ಅಯ್ಯಪ್ಪ(28) ಎಂಬವರು ಉಡುಪಿ ಜಿಲ್ಲೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೂ, ಕಳೆದ ಒಂದೆರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ಮದುವೆಗೆ ಎರಡೂ ಮನೆಯವರ ವಿರೋಧವಿದ್ದರೂ ಜೋಡಿಯು ವಿವಾಹವಾಗಿದ್ದು ಯುವತಿ-ಹಾಗೂ ಮೃತ ಅಯ್ಯಪ್ಪನ ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು.
ಮದುವೆಯಾದ ಜೋಡಿಯ ಸುಖ ಸಂಸಾರದ ಸಂಕೇತವಾಗಿ ಮಗು ಜನಿಸಿದ್ದು ಮಗುವಿಗೆ 20 ದಿನ ತುಂಬುವ ವೇಳೆಗಾಗಲೇ ಅಯ್ಯಪ್ಪ ಕುಸಿದು ಬಿದ್ದು ಮೃತಪಟ್ಟಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಇತ್ತ ಸಾವಿನ ಸುದ್ದಿ ಮನೆಮಂದಿಗೆ ತಿಳಿದು ಶವ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರೂ, ಮಗು ಹಾಗೂ ತಾಯಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಕಂಗೆಟ್ಟ ತಾಯಿ ಹಾಗೂ ಮಗು ಬೇರೆ ದಾರಿ ತೋಚದೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ನಿಟ್ಟೂರಿನ ಸಖಿ ಆಶ್ರಯ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.
ಒಂದೆಡೆ ಮಗು ಹೆತ್ತರೂ ಇಲ್ಲದಾದ ಬಾಣಂತನದ ಆರೈಕೆ, ಇನ್ನೊಂದೆಡೆ ಪತಿಯನ್ನು ಕಳೆದುಕೊಂಡ ನೋವು.ಕರುಣಾಜನಕ ಸ್ಥಿಯಲ್ಲಿರುವ ಮಹಿಳೆಯನ್ನು ಸಂಬಂಧಪಟ್ಟ ಇಲಾಖೆ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಎರಡೂ ಮನೆಯವರ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಯುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.