Raita Shakti Scheme : ರೈತಶಕ್ತಿ ಯೋಜನೆ ಸಹಾಯಧನದಿಂದ ಡೀಸೆಲ್ ಕಡಿತ? ರೈತರಲ್ಲಿ ಹೆಚ್ಚಿದ ಆತಂಕ!

ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಸರಕಾರ ರೈತಶಕ್ತಿ ಎಂಬ ವಿನೂತನ ಯೋಜನೆಯನ್ನು ಘೋಷಣೆ ಮಾಡಿದ್ದು, ಜುಲೈ 11 ರಂದು ಈ ಯೋಜನೆ ಜಾರಿಗೊಳಿಸಿ ಆದೇಶ ಕೂಡಾ ನೀಡಿದೆ. ರೈತರಿಗೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹಿಸುವ ಸಲುವಾಗಿ ಡೀಸೆಲ್ ಖರೀದಿಗೆ ಸಹಾಯಧನ ನೀಡುವ ರೈತ ಶಕ್ತಿ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಪ್ರತಿಯೊಬ್ಬ ರೈತರಿಗೂ, ಎಕರೆಗೆ ತಲಾ 250 ರೂ.ನಂತೆ ಗರಿಷ್ಠ 5 ಎಕರೆಯವರೆಗೆ ಸಹಾಯಧನ ನೀಡಲಾಗುತ್ತದೆ.

ಈ ಯೋಜನೆಯ ಪ್ರಕಾರ, ಫ್ರುಟ್ಸ್ ಪೋರ್ಟಲ್‌ನಲ್ಲಿ ರೈತರು ತಮ್ಮ ಜಮೀನಿನ ಕ್ಷೇತ್ರವನ್ನು (ಹಿಡುವಳಿ) ಎಷ್ಟು ನೋಂದಣಿ ಮಾಡಿದ್ದಾರೋ ಅಷ್ಟು ಎಕರೆ ಜಮೀನಿಗೆ ಮಾತ್ರ ಸಹಾಯಧನ ಲಭ್ಯವಾಗುತ್ತದೆ. ಆದರೆ ಸಮಸ್ಯೆ ಏನಾಗಿದೆಯೆಂದರೆ, ಬಹಳಷ್ಟು ಮಂದಿ ರೈತರು ತಮಗಿರುವ ಜಮೀನಿನ ಪ್ರಮಾಣಕ್ಕಿಂತ ಕಡಿಮೆ ಕ್ಷೇತ್ರವನ್ನು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿ ಬಿಟ್ಟಿದ್ದಾರೆ. ಹಾಗೂ ಕೆಲವು ರೈತರಂತು ಇನ್ನೂ ನೋಂದಣಿಯನ್ನೇ ಮಾಡಿಸಿಲ್ಲ. ಹೀಗೆ ಮಾಡಿದರೆ ರೈತರಿಗೆ ‘ರೈತ ಶಕ್ತಿ ಯೋಜನೆ’ ಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ರೈತರು 1 ಗುಂಟೆ ಜಮೀನು ಹೊಂದಿದ್ದರೂ ಕೇಂದ್ರ ಸರಕಾರದ 6 ಸಾವಿರ ರೂ. ಹಾಗೂ ರಾಜ್ಯ ಸರಕಾರದ 4 ಸಾವಿರ ರೂ. ಪ್ರೋತ್ಸಾಹ ಧನ ಸೇರಿ ವರ್ಷಕ್ಕೆ ಒಟ್ಟು 10 ಸಾವಿರ ರೂ. ಪ್ರೋತ್ಸಾಹ ಧನ ಲಭ್ಯವಾಗುತ್ತದೆ.
ಕೇಂದ್ರ ಹಾಗೂ ರಾಜ್ಯ ಸರಕಾರ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದ ಸಂದರ್ಭದಲ್ಲಿ ಫ್ರುಟ್ಸ್ ಪೋರ್ಟಲ್‌ನಲ್ಲಿ ರೈತರು ನೋಂದಣಿ ಮಾಡಿಸುವ ಕ್ರಮ ಜಾರಿಗೆ ಬಂದಿತು. ಕೃಷಿ ಸಮ್ಮಾನ್ ಯೋಜನೆಯಲ್ಲಿ ರೈತರ ಹಿಡುವಳಿಯ ಲೆಕ್ಕಾಚಾರ ಪರಿಗಣನೆಯಾಗುವುದಿಲ್ಲ.

ಹಾಗಾಗಿ ಕೇವಲ ನೋಂದಣಿ ಪ್ರಕ್ರಿಯೆಯ ಸಲುವಾಗಿ ಯಾವುದಾದರೂ ಒಂದು ಸರ್ವೆ ನಂಬರ್‌ನಲ್ಲಿರುವ ಜಮೀನಿನ ಪಹಣಿ ನೀಡಿ ನೋಂದಣಿ ಮಾಡಿಸಿದ್ದರು.
ಇದನ್ನು ಒಂದಕ್ಕಿಂತ ಹೆಚ್ಚು, ಬೇರೆ ಬೇರೆ ಸರ್ವೆ ನಂಬರ್‌ಗಳಲ್ಲಿ ಜಮೀನು ಹೊಂದಿದ್ದ ಬಹಳಷ್ಟು ರೈತರು ಮಾಡಿದ್ದರು. ಇದರಿಂದ ಫ್ರುಟ್ಸ್ ಪೋರ್ಟಲ್‌ನಲ್ಲಿ ರೈತರು ಪಹಣಿ ನೀಡಿದ್ದ ಜಮೀನಿನ ಕ್ಷೇತ್ರ ಮಾತ್ರ ನೋಂದಣಿಯಾಗಿದೆ. ಆದರೆ ರೈತ ಬೇರೆ ಕಡೆ ಹೊಂದಿರುವ ಜಮೀನು ಲೆಕ್ಕ ಇಲ್ಲವಾಗಿದೆ.

ರೈತ ಶಕ್ತಿ ಯೋಜನೆಯಡಿ ರೈತರಿಗೆ ಡೀಸೆಲ್ ಖರೀದಿಗಾಗಿ
ಪ್ರತಿ ಎಕರೆಗೆ 250 ರೂ.ನಂತೆ ಗರಿಷ್ಠ 5 ಎಕರೆವರೆಗೆ ಸಹಾಯಧನ ನೀಡಲಾಗುತ್ತದೆ. ಫ್ರುಟ್ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ಜಮೀನಿಗೆ ಮಾತ್ರ ಸಹಾಯಧನ ನೀಡಲಾಗುತ್ತಿದ್ದು ರೈತರು ಹೆಚ್ಚು ಜಮೀನು ಹೊಂದಿದ್ದಲ್ಲಿ ಆದಷ್ಟು ಶೀಘ್ರ ಪೋರ್ಟಲ್‌ನಲ್ಲಿ ನಮೂದಿಸಬೇಕಿದೆ.

ಈಗ ಪ್ರಸ್ತುತ ಜಾರಿಗೊಳಿಸಿರುವ ರೈತ ಶಕ್ತಿ ಯೋಜನೆಯ ಪ್ರಕಾರ, ಪ್ರತಿ ಎಕರೆಗೆ 250 ರೂ. ಸಿಗುತ್ತದೆ‌. ಇದು ಪೋರ್ಟಲ್‌ನಲ್ಲಿ ಕಡಿಮೆ ಜಮೀನು ನೋಂದಣಿ ಮಾಡಿಸಿದ ರೈತರಿಗೆ ನಿಜಕ್ಕೂ ಲಾಭ ಅಲ್ಲ. ಏಕೆಂದರೆ ವಾಸ್ತವದಲ್ಲಿ ರೈತ ಹೆಚ್ಚು ಜಮೀನು ಹೊಂದಿದ್ದರೂ ಕೂಡಾ ಆತನಿಗೆ ಸಹಾಯಧನ ಕಡಿಮೆಯೇ ಸಿಗುತ್ತಿದೆ.

ಪ್ರತಿಯೊಬ್ಬ ರೈತನಿಗೆ ರೈತ ಶಕ್ತಿ ಯೋಜನೆಯ ಪ್ರಕಾರ ಪ್ರತಿ ಎಕರೆಗೆ 250 ರೂ. ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ರೈತ ಎಷ್ಟೇ ಜಮೀನು ಹೊಂದಿದ್ದರೂ ಕೂಡಾ ಸಹಾಯಧನವನ್ನು ಗರಿಷ್ಠ 5 ಎಕರೆಯವರೆಗೆ ಮಾತ್ರ ನೀಡಲಾಗುತ್ತದೆ. 1 ಎಕರೆ ಜಮೀನು ಹೊಂದಿರುವ ರೈತರು 250 ರೂ. ಸಹಾಯಧನ ಪಡೆದರೆ 5 ಎಕರೆ ಮತ್ತು ಅದಕ್ಕಿಂತ ಹೆಚ್ಚು ಜಮೀನು ಹೊಂದಿರುವ ರೈತರು 1250 ರೂ. ಸಹಾಯ ಧನ ಪಡೆಯುತ್ತಾರೆ.

ಹಾಗಾಗಿ ಫ್ರುಟ್ಸ್ ಪೋರ್ಟಲ್‌ನಲ್ಲಿ ಬಹಳಷ್ಟು ರೈತರು ಕಡಿಮೆ ಜಮೀನು ನೋಂದಣಿ ಮಾಡಿರುವುದರಿಂದ, ರೈತ ಶಕ್ತಿ ಯೋಜನೆಯ ಲಾಭ ಪಡೆಯುವ ಸಲುವಾಗಿ ರೈತರಿಗೆ ತಮಗಿರುವ ಜಮೀನನ್ನು ಪೂರ್ಣ ಪ್ರಮಾಣದಲ್ಲಿ ನೋಂದಣಿ ಮಾಡಿಸಲು ಅವಕಾಶ ನೀಡಲಾಗಿದೆ.

ಹಾಗಾಗಿ ರೈತರು ಆದಷ್ಟು ಶೀಘ್ರದಲ್ಲಿ, ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಅಥವಾ ಗ್ರಾಮ ಲೆಕ್ಕಾಧಿಕಾರಿ ಬಳಿ ತೆರಳಿ, ಫ್ರುಟ್ಸ್ ಪೋರ್ಟಲ್ ಐಡಿ ಸಂಖ್ಯೆಯ ಜತೆಗೆ ಆಧಾರ್ ಕಾರ್ಡ್ ಮತ್ತು ಬಾಕಿಯಿರುವ ಹೆಚ್ಚುವರಿ ಜಮೀನಿನ ಪಹಣಿ ನೀಡಿ ನೋಂದಣಿ ಮಾಡಬೇಕು. ಅಷ್ಟು ಮಾತ್ರವಲ್ಲದೇ,ನೋಂದಣಿ ಮಾಡಿಸಿ ಐಡಿ ಸಂಖ್ಯೆಯನ್ನೇ ಪಡೆಯದ ರೈತರು ಕೂಡಾ ಯಾವುದೇ ಇಲಾಖೆಯ ಕಚೇರಿಗಳಿಗೆ ತೆರಳಿ ಹೊಸದಾಗಿ ನೋಂದಣಿ ಮಾಡಿಸಿ ಐಡಿ ಸಂಖ್ಯೆ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.