ಬೆಳ್ಳಂಬೆಳಗ್ಗೆ ಮೊರೆದ ಪೊಲೀಸರ ಪಿಸ್ತೂಲ್: ದರೋಡೆಕೋರರ ಮೇಲೆ ಫೈರಿಂಗ್
ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಕಲಬುರಗಿಯ ಬಿದ್ದಾಪೂರ ಕಾಲೋನಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ ತುಳಜಾಪೂರ ತಾಲೂಕಿನ ಝಳಕೋಳನ ಲವಾ ಮತ್ತು ದೇವಿದಾಸ ಬಂಧಿತ ಆರೋಪಿಗಳು.
ಹಗಲಿನಲ್ಲಿ ದೇವರ ಪ್ರತಿಮೆ ಹೊತ್ತು ಗಲ್ಲಿಗಲ್ಲಿ ತಿರುಗುತ್ತಿದ್ದ ಆರೋಪಿಗಳು ರಾತ್ರಿಯ ದರೋಡೆಗೆ ಸ್ಕೆಚ್ ಬರೆಯುತ್ತಿದ್ದರು. ಹಾಗೆ ಬೆಳಿಗ್ಗೆ ತಾವು ಗುರುತಿಸಿದ ಸ್ಥಳದಲ್ಲಿ ರಾತ್ರಿ ದರೋಡೆ ನಡೆಸುತ್ತಿದ್ದರು. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳ ಬಗ್ಗೆ ಸಾರ್ವಜನಿಕರ ಸಹಾಯದಿಂದ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಅಶೋಕ ನಗರ ಸರ್ಕಲ್ ಇನ್ಸ್ಪೆಕ್ಟರ್ ಪಂಡಿತ ಸಾಗರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆ ಸಂಬಂಧ ಕಲಬುರ್ಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.