Home latest ಏನೂ ಅರಿಯದ 3 ವರ್ಷದ ಕಂದನನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದ ತಾಯಿ | ನಂತರ...

ಏನೂ ಅರಿಯದ 3 ವರ್ಷದ ಕಂದನನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದ ತಾಯಿ | ನಂತರ ಆತ್ಮಹತ್ಯೆಗೆ ಯತ್ನ

Hindu neighbor gifts plot of land

Hindu neighbour gifts land to Muslim journalist

ತಾಯಿಯೊಬ್ಬಳು ಕಳೆದ ತಿಂಗಳಷ್ಟೇ ತನ್ನ 4 ವರ್ಷದ ಮಗಳು ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ನಾಲ್ಕನೇ, ಮಹಡಿಯಿಂದ ಕೆಳಗೆ ಎಸೆದ ಕೃತ್ಯ ಮಾಸುವ ಮುನ್ನವೇ, ಈಗ ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ತಾಯಿ ತನ್ನ ಮೂರು ವರ್ಷದ ಮಗುವನ್ನು ಟಬ್‌ನಲ್ಲಿ ಮುಳುಗಿಸಿ ಕೊಂದಿದ್ದಾಳೆ. ನಂತರ ತಾನೂ ನೇಣಿಗೆ ಶರಣಾಗುವ ಯತ್ನ ನಡೆಸಿದ ಘಟನೆ ವರದಿಯಾಗಿದೆ.

ಗಾಯಿತ್ರಿ ದೇವಿ(24) ಹೆತ್ತ ಮಗಳನ್ನೇ ಸಾಯಿಸಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ತಾಯಿ ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಗಿ ವರದಿಯಾಗಿದೆ. ಈ ಅಮಾನವೀಯ ಘಟನೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಾನೆಕುಂದಿ ಗುರುರಾಜ ಲೇಔಟ್‌ನ ಸಂಯುಕ್ತ(3) ತಾಯಿಯಿಂದಲೇ ಕೊಲೆಯಾದ ಮಗು.

ತಮಿಳುನಾಡಿನ ವೆಲ್ಲೂರು ಮೂಲದ ನರೇಂದ್ರನ್ ಐದು ವರ್ಷದ ಹಿಂದೆ ಗಾಯಿತ್ರಿ ದೇವಿಯನ್ನು ವಿವಾಹವಾಗಿದ್ದು, ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ದಂಪತಿಗೆ ಮೂರು ವರ್ಷದ ಸಂಯುಕ್ತ ಇದ್ದಳು. ನಗರದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ನರೇಂದ್ರನ್ ಶನಿವಾರ ಕಾರ್ಯ ನಿಮಿತ್ತ ತಮಿಳುನಾಡಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಗಾಯಿತ್ರಿದೇವಿ ಹಾಗೂ ಸಂಯುಕ್ತ ಮಾತ್ರ ಇದ್ದರು. ಭಾನುವಾರ ತಡರಾತ್ರಿ ಮಗು ಸಂಯುಕ್ತಳನ್ನು ನೀರಿನ ಟಬ್‌ನಲ್ಲಿ ಮುಳುಗಿಸಿರುವ ಗಾಯಿತ್ರಿ ದೇವಿ, ಬಳಿಕ ತಾನು ಸಹ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಮುಂಜಾನೆ 4ರ ಸುಮಾರಿಗೆ ನರೇಂದ್ರನ್ ತಮಿಳುನಾಡಿನಿಂದ ನಗರಕ್ಕೆ ವಾಪಸಾಗಿ ಮನೆಗೆ ಬಂದಿದ್ದು, ಕಾಲಿಂಗ್ ಬೆಲ್ ಒತ್ತಿದ್ದಾರೆ. ಎಷ್ಟೇ ಬಾರಿ ಬಾಗಿಲು ಬಡಿದರೂ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಬಾಗಿಲು ಜೋರಾಗಿ ತಳ್ಳಿದಾಗ ಬಾಗಿಲು ತೆರೆದುಕೊಂಡಿದೆ. ಈ ವೇಳೆ ಒಳಹೋಗಿ ನೋಡಿದಾಗ ಮಗಳು ಸಂಯುಕ್ತ ನೀಟಿನ ಟಬ್‌ನಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ರೂಮ್‌ಗೆ ತೆರಳಿ ನೋಡಿದಾಗ ಪತ್ನಿ ಗಾಯಿತ್ರಿ ದೇವಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಆಕೆಗೆ ಜೀವ ಇರುವುದು ಗೊತ್ತಾಗಿದೆ. ಕೂಡಲೇ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದ್ದಾರೆ

ಕೆಲ ದಿನಗಳಿಂದ ಗಾಯತ್ರಿ ದೇವಿ ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಹಾಗೂ ಇದಕ್ಕೆ ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಪತಿ ನರೇಂದ್ರನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.