‘ನನ್ನನ್ನು ಯಾರೋ ಕೊಲೆ ಮಾಡುತ್ತಾರೆ’ ಎಂದು ಪೊಲೀಸರಿಗೆ ಕರೆ ಮಾಡಿ ಹೇಳುತ್ತಿದ್ದ ಮಹಿಳೆಯ ಹತ್ಯೆ!

Share the Article

ಬೆಂಗಳೂರು: ನನ್ನನ್ನು ಯಾರೋ ಕೊಲೆ ಮಾಡುತ್ತಾರೆ ಎಂದು ಪೊಲೀಸರಿಗೆ ಆಗಾಗ ಕರೆ ಮಾಡಿ ಹೇಳುತ್ತಿದ್ದ ಮಹಿಳೆಯ ಕೊಲೆ ಕೊನೆಗೂ ನಡೆದೋದ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಡೆದಿದೆ.

ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ ಜಯಶ್ರೀ (60) ಕೊಲೆಗೀಡಾದ ಮಹಿಳೆ.

ಎಚ್‌ಎಸ್‌ಆರ್ ಬಡಾವಣೆಯ ಫುಡ್ ಡೇಸ್ ಸರ್ಕಲ್ ಬಳಿಯ ಮನೆಯೊಂದರಲ್ಲಿ ನಿನ್ನೆ ತಡರಾತ್ರಿ ಈ ಕೊಲೆ ನಡೆದಿದ್ದು, ಮನೆಯಲ್ಲಿನ ಬಟ್ಟೆಗಳನ್ನು ಬಳಸಿ ಈಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಉಂಟಾಗಿದೆ. ಈ ಮನೆಗೆ ಸೆಕ್ಯೂರಿಟಿ ಗಾರ್ಡ್ ಆಗಿ ನೇಪಾಳ ಮೂಲದ ವ್ಯಕ್ತಿ ಕೆಲಸ ಮಾಡುತ್ತಿದ್ದು, ಆತ ಕಾಣೆಯಾಗಿದ್ದು ಪರಾರಿ ಆಗಿರುವ ಅನುಮಾನವಿದೆ. ಈ ಕೊಲೆಯ ಹಿಂದೆ ಆತನ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರು ಶ್ವಾನದಳ, ಫಿಂಗರ್ ಪ್ರಿಂಟ್ ತಜ್ಞರ ಜೊತೆ ಬಂದು ಪರಿಶೀಲನೆ ನಡೆಸಿದ್ದಾರೆ. ಜಯಶ್ರೀ ಆಗಾಗ ಪೊಲೀಸ್ ಠಾಣೆಗೆ ಕರೆ ಮಾಡಿ, ‘ನನ್ನನ್ನು ಯಾರೋ ಕೊಲೆ ಮಾಡುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ವಾರಕ್ಕೆರಡು ಸಲ ಎಚ್‌ಎಸ್‌ಆರ್ ಠಾಣೆ ಪೊಲೀಸರು ಇವರ ಮನೆಗೆ ಬಂದು ಹೋಗುತ್ತಿದ್ದರು. ಅದಾಗ್ಯೂ ಕಳೆದ ರಾತ್ರಿ 10ರಿಂದ 12 ಗಂಟೆ ಸಮಯದಲ್ಲಿ ಕೊಲೆ ನಡೆದಿರುವ ಲಕ್ಷಣಗಳು ಕಂಡುಬಂದಿವೆ.

ಕೊಲೆ‌ ಬಳಿಕ ಮನೆಯಲ್ಲಿನ ಚಿನ್ನಾಭರಣ ಹಾಗೂ ನಗದು ಕೊಂಡೊಯ್ದಿದ್ದಾರೆ. ಘಟನೆ ಸಂಬಂಧ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಆದಷ್ಟೂ ಬೇಗ ಆರೋಪಿಯನ್ನ ಬಂಧಿಸಲಾಗುವುದು ಎಂದು ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

ಜಯಶ್ರೀ ಪತಿ ಶ್ರೀನಿವಾಸನ್ ಕೇಂದ್ರ ಗೃಹ ಇಲಾಖೆಯ ಇಂಟರ್‌ಸ್ಟೇಟ್ ಪೊಲೀಸ್ ವೈರ್‌ಲೆಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಮಕ್ಕಳಿದ್ದರೂ ಪತಿಯ ಮರಣದ ಬಳಿಕ ಜಯಶ್ರೀ ಒಂಟಿಯಾಗಿಯೇ ವಾಸವಿದ್ದರು.

Leave A Reply