ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ!!!
ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಗುರುವಾರ ನಿಧನರಾದರು. ಹೃದಯಾಘಾತದಿಂದ ಅವರು ರಾತ್ರಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಿಧನರಾದರು.
ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೀರ್ತಿ ಇವರಿಗೆ ಲಭಿಸುತ್ತದೆ. ಕಾಡುಕುದುರೆ ಚಿತ್ರದ ಹಿನ್ನೆಲೆ ಗಾಯನಕ್ಕೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರ ಪ್ರಶಸ್ತಿಲಭಿಸಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ( ಇಂದು) ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದ ಸುಬ್ಬಣ್ಣ ಅವರ ಮೂಲಹೆಸರು “ಜಿ.ಸುಬ್ರಹ್ಮಣ್ಯಂ”. ಇವರ ತಂದೆ ಶ್ರೀ ಗಣೇಶ್ ರಾವ್ ಹಾಗೂ ತಾಯಿ ರಂಗನಾಯಕಮ್ಮ. ಇವರ ತಾತನ ಹೆಸರು ಶಾಮಣ್ಣ. ಇವರು ಸಂಗೀತದಲ್ಲಿ ಭಾರೀ ದೊಡ್ಡ ವಿದ್ವಾಂಸರು.
ಆರಂಭದಲ್ಲಿ ಆಕಾಶವಾಣಿಯ ಗಾಯಕರಾಗಿ ಭಾರೀ ಜನಮನ್ನಣೆ ಪಡೆದಿದ್ದ ಇವರು ನಂತರ ಚಂದ್ರಶೇಖರ ಕಂಬಾರ ನಿರ್ದೇಶನದ ‘ಕರಿಮಾಯಿ’ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಕೊಟ್ಟರು. ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿ ಭಾರೀ ಹೆಸರನ್ನು ಗಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸುಬ್ಬಣ್ಣ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. 1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ “ರಜತಕಮಲ್” ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು. ಕಾಡು ಕುದುರೆ ಚಿತ್ರ ಇವರಿಗೆ ಬಹಳಷ್ಟು ಹೆಸರು ತಂದಿತು.ಇವರು ಸುಗಮ ಸಂಗೀತದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದರು.