ಈದ್ಗಾ ಮೈದಾನದಲ್ಲಿ ನಾವು ಗಣೇಶೋತ್ಸವ ಆಚರಿಸುತ್ತೇವೆ ತಾಕತ್ತಿದ್ದರೆ ತಡೆಯಿರಿ – ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​

ಬೆಂಗಳೂರು : ಚಾಮರಾಜಪೇಟೆ ಶಾಸಕ ಜಮೀರ್‌ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿದ್ದು, ಈದ್ಗಾ ಮೈದಾನದಲ್ಲಿ ನಾವು ಗಣೇಶೋತ್ಸವ ಆಚರಿಸುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಸವಾಲು ಹಾಕಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಜಮೀರ್ ಅಹ್ಮದ್​ ವಿರೋಧ ಹಿನ್ನೆಲೆ ಈದ್ಗಾ ಮೈದಾನ ಜಮೀರ್ ಅಹ್ಮದ್ ಪಿತ್ರಾರ್ಜಿತ ಆಸ್ತಿ ಅಲ್ಲ. ವಕ್ಫ್ ಬೋರ್ಡ್, ಮುಸ್ಲಿಂರ ಆಸ್ತಿ ಅಲ್ಲ. ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ತಾಕತ್ ಇದ್ದರೆ ತಡೆಯಲಿ ನೋಡೋಣ ಅಂತಾ ಜಮೀರ್ ಅಹ್ಮದ್‌ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಸವಾಲು ಹಾಕಿದ್ದಾರೆ.

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್‌, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಇಲ್ಲಿ ಅವಕಾಶ ಇಲ್ಲ. ಆದರೆ ಸ್ವಾತಂತ್ರ್ಯೋತ್ಸವವನ್ನು ನಾವೇ ಅದ್ಧೂರಿಯಾಗಿ ಆಚರಿಸುತ್ತೇವೆ ಎಂದು ಹೇಳಿದ್ದರು. ಜಮೀರ್‌ ಅವರಿಂದ ಈ ಹೇಳಿಕೆ ಪ್ರಕಟವಾದ ಬೆನ್ನಲ್ಲೇ ಶ್ರೀರಾಮ ಸೇನೆ, ಅದು ಈದ್ಗಾ ಮೈದಾನವಲ್ಲ. ಅಲ್ಲಿರುವುದು ಬಿಬಿಎಂಪಿ ಆಟದ ಮೈದಾನ. ಗಣೇಶೋತ್ಸವವನ್ನು ಅಲ್ಲೇ ಮಾಡುತ್ತೇವೆ. ತಾಕತ್ತಿದ್ದರೆ ತಡೀರಿ ಎಂದು ಪೋಸ್ಟರ್‌ ಹಾಕಿದೆ. ಜಮೀರ್‌ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈಗ ಈ ವಿಚಾರದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಪ್ರಸ್ತುತ ಈದ್ಗಾ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಮುಸ್ಲಿಂ ಸಮುದಾಯದ ರಂಜಾನ್, ಬಕ್ರೀದ್‌ ಆಚರಣೆ ಹೊರತುಪಡಿಸಿ ಯಾವುದೇ ಧಾರ್ಮಿಕ ಆಚರಣೆಗಳಿಗೂ ಪೊಲೀಸರಿಂದ ಅವಕಾಶವಿಲ್ಲ. ಆರ್‌ಎಸ್‍ಎಸ್ ಪಥ ಸಂಚಲನ, ಧಾರ್ಮಿಕ ಆಚರಣೆಗಳು, ಇತರೆ ಕಾರ್ಯಕ್ರಮ ಮಾಡಲು ಮುಂದಾದಾಗ ಪೊಲೀಸರು ಅವಕಾಶ ಕೊಟ್ಟಿರಲಿಲ್ಲ.

ಈದ್ಗಾ ಮೈದಾನ ಯಾರ ಆಸ್ತಿ ಎಂಬ ವಿಚಾರದ ಚರ್ಚೆ ಮುನ್ನೆಲೆಗೆ ಬಂದ ಬೆನ್ನಲ್ಲೇ ಕಳೆದ ತಿಂಗಳು ಬಿಬಿಎಂಪಿ ಈದ್ಗಾ ಮೈದಾನ ನಿಮ್ಮ ಆಸ್ತಿ ಎಂದು ಸಾಬೀತು ಪಡಿಸಲು ದಾಖಲೆ ನೀಡುವಂತೆ ವಕ್ಫ್‌ ಬೋರ್ಡ್‌ಗೆ ಸೂಚಿಸಿತ್ತು. ಆದರೆ ವಕ್ಫ್‌ ಬೋರ್ಡ್‌ ಕಡೆಯಿಂದ ಸರಿಯಾದ ದಾಖಲೆಗಳು ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ ಎಂದು ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದರು. ಬಿಬಿಎಂಪಿಯಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮುಸ್ಲಿಮರಿಗೆ ಮಾತ್ರ ಯಾಕೆ ಈ ಜಾಗದಲ್ಲಿ ಅವಕಾಶ ಹಿಂದೂಗಳಿಗೆ ಕೊಡಿ, ನಾವು ಗಣೇಶೋತ್ಸವ ಆಚರಿಸುತ್ತೇವೆ ಎಂದು ವಾದವನ್ನು ಮುಂದಿಟ್ಟಿವೆ.

ಕಂದಾಯ ಇಲಾಖೆ ಸ್ವತ್ತು ಎಂದು ಉಲ್ಲೇಖವಾದ ಬೆನ್ನಲ್ಲೇ ಧಾರ್ಮಿಕ ಕಾರ್ಯಕ್ರಮ ನಡೆಯಲು ಅಧಿಕೃತ ಅನುಮತಿಯನ್ನು ಕಂದಾಯ ಇಲಾಖೆ ಕೊಡಬೇಕು. ಗಣೇಶೋತ್ಸವ ಆಚರಣೆಗೆ ಕಂದಾಯ ಇಲಾಖೆ ಅನುಮತಿ ನೀಡುವ ಮುನ್ನ ಪೊಲೀಸರು ಅನುಮತಿ ನೀಡಬೇಕು. ಧಾರ್ಮಿಕ ಆಚರಣೆಯೆ ಯಾವುದೇ ಸಮಸ್ಯೆ ಇಲ್ಲ ಎಂದು ಪೊಲೀಸರು ತಿಳಿಸಿದರೆ ಮತ್ರ ಕಂದಾಯ ಇಲಾಖೆ ಅನುಮತಿ ನೀಡಲು ಸಾಧ್ಯ.

ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂಬ ಆದೇಶ ಬೆನ್ನಲ್ಲೇ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಜೊತೆಗೆ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Leave A Reply

Your email address will not be published.