ಏಳು ವರ್ಷದಿಂದ ಮಕ್ಕಳಿಲ್ಲ ಎಂಬ ಕೊರಗಿನಲ್ಲಿದ್ದ ದಂಪತಿ | ಇದೀಗ ಒಂದೇ ಬಾರಿಗೆ 5 ಮಕ್ಕಳ ಅಪ್ಪ ಅಮ್ಮ
ಕಷ್ಟ ಎಂದು ಬಂದಾಗ ದೇವರು ಕೈಜೋಡಿಸದಿದ್ದಾಗ, ಪ್ರತಿಯೊಬ್ಬರು ಕೂಡ ದೇವರನ್ನು ಬಯ್ಯುತ್ತಾರೆ. ಆದರೆ ತತ್ ತಕ್ಷಣಕ್ಕೆ ದೇವರು ಕೇಳಿದ ವರಗಳನ್ನು ನೀಡದಿದ್ದರೂ, ಸಮಯ ಬಂದಾಗ ಖಂಡಿತವಾಗಿಯೂ ಆಶೀರ್ವದಿಸುತ್ತಾನೆ ಎಂಬುದಕ್ಕೆ ಇಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಹೌದು. ಮಕ್ಕಳೇ ಇಲ್ಲ ಎಂದು ಕೊರಗುತ್ತಿದ್ದ ದಂಪತಿಗಳಿಗೆ ಐದು ಮಕ್ಕಳು ಜನಿಸಿದ ಅಪರೂಪದ ಘಟನೆ ನಡೆದಿದೆ.
ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್ಪುರದ ಪಿಪ್ರಾನಿ ಗ್ರಾಮದ ಅಶ್ಕ್ ಅಲಿ ಹಾಗೂ ರೇಷ್ಮಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಮದುವೆಯಾಗಿ ವರ್ಷಗಳು ಉರುಳಿದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ, ಸಿಕ್ಕಸಿಕ್ಕ ಹರಕೆಗಳನ್ನೆಲ್ಲಾ ಹೊತ್ತಿದ್ದರು. ಇದರ ನಡುವೆ ಹಲವು ವೈದ್ಯರನ್ನು ಕೂಡ ಭೇಟಿಯಾಗಿ, ಹಣ ಖರ್ಚು ಮಾಡಿದ್ದರು. ಆದರೆ ಈ ದಂಪತಿಗಳಿಗೆ ಮಗು ಮಾತ್ರ ಜನಿಸಿರಲಿಲ್ಲ. ಹೀಗಾಗಿ ದಂಪತಿಗಳು ಮಕ್ಕಳ ಆಸೆಯನ್ನೇ ಬಿಟ್ಟುಬಿಟ್ಟಿದ್ದರು.
ದೇವರ ಆಶೀರ್ವಾದ ಎಂಬಂತೆ, ಈ ವರ್ಷಾರಂಭದಲ್ಲಿ ರೇಷ್ಮಾ ಗರ್ಭವತಿಯಾಗಿದ್ದಾರೆ. ಅಂತಿಮವಾಗಿ ಸೋಮವಾರ ದೇವರು ವರ ಕೊಟ್ಟಿದ್ದಾನೆ. ಹೌದು, ರೇಷ್ಮಾ ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದು ಕೂಡ ಐದು ಮಕ್ಕಳಿಗೆ. ಒಂದೇ ಬಾರಿಗೆ ಐದು ಮಕ್ಕಳು ಜನಿಸಿದ್ದು ಆಸ್ಪತ್ರೆ ಸಿಬ್ಬಂದಿಗೂ ಆಶ್ಚರ್ಯಗೊಂಡಿದ್ದಾರೆ. ಈ ಸುದ್ದಿ ತಕ್ಷಣವೇ ಆಸ್ಪತ್ರೆಯಾದ್ಯಂತ ಹರಡಿದ್ದು, ಮಕ್ಕಳನ್ನು ನೋಡಲು ಎಲ್ಲರೂ ಆಗಮಿಸಿದ್ದಾರೆ.
ರೇಷ್ಮಾ ಇಬ್ಬರು ಗಂಡು ಮತ್ತು 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರಿಗೆ 7 ತಿಂಗಳಲ್ಲಿ ಹೆರಿಗೆಯಾಗಿದ್ದು, 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನಂತರ ತಾಯಿಯು ಕೂಡ ಆರೋಗ್ಯವಾಗಿದ್ದಾರೆ. ಇನ್ನು ಐವರು ಮಕ್ಕಳು 300 ರಿಂದ 660 ಗ್ರಾಂ ತೂಕ ಹೊಂದಿದ್ದು, ತೀವ್ರ ನಿಗಾ ಅಗತ್ಯದ ಕಾರಣ ಕಂದಮ್ಮಗಳನ್ನು ಜೈಪುರಕ್ಕೆ ಕಳುಹಿಸಲಾಗಿದೆ. ಇದಾಗ್ಯೂ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಆಶಾ ಮೀನಾ ತಿಳಿಸಿದ್ದಾರೆ. ಮಕ್ಕಳಿಲ್ಲದ ನೋವಿನಲ್ಲೇ ಕಾಲ ಕಳೆಯುತ್ತಿದ್ದ ಆಶ್ಕ್ ಅಲಿ ದಂಪತಿ ಇದೀಗ ಒಂದೇ ಬಾರಿಗೆ 5 ಮಕ್ಕಳ ಅಪ್ಪ ಅಮ್ಮ ಆಗಿರುವುದು ವಿಶೇಷವೇ ಸರಿ..