ಮೂಗ- ಕಿವುಡ ಜೋಡಿಯ ಮದುವೆ ಮಾಡಿಸಿದ ಮೂಗ ಸ್ನೇಹಿತ!
ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರ ಕ್ಷಣ. ಆದ್ರೆ, ಯಾರಿಗೆ ಯಾರು ಎಂಬುದನ್ನು ಆ ಬ್ರಹ್ಮನೇ ಹಣೆಬರಹದಲ್ಲಿ ಬರೆದಿರುತ್ತಾನೆ. ಇದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಮದುವೆಯೇ ಸಾಕ್ಷಿ.
ಹೌದು. ಇದು ಅಂತಿಂತ ಮದುವೆ ಅಲ್ಲ. ಅಪರೂಪದಲ್ಲಿ ಅಪರೂಪವಾದ ವಿಶೇಷ ಮದುವೆ. ಅದುವೇ ಕಿವುಡ ಮತ್ತು ಮೂಗಿಯ ಮದುವೆ. ಯಾವುದೇ ಒಂದು ಕಾರ್ಯಕ್ಕೆ ದೇವರ ಆಶೀರ್ವಾದ ಒಂದಿದ್ದರೆ ಸಾಕು ಎನ್ನುವ ಮಾತಿದೆ. ಅದರಂತೆಯೇ ಈ ಜೋಡಿಯ ಪಾಲಿಗೆ ದೇವರೇ ಕೈ ಜೋಡಿಸಿದ್ದಾನೆ.
ಈ ಜೋಡಿಯ ಎರಡು ಕುಟುಂಬಗಳು ತಮ್ಮ ಮೂಗ – ಕಿವುಡ ಮಕ್ಕಳ ಮದುವೆಯ ಚಿಂತೆಯಲ್ಲೇ ಮುಳುಗಿದ್ದರು. ಈ ವೇಳೆ ಮೂಗ- ಕಿವುಡ ಜೋಡಿಯನ್ನು ಮೂಗನೇ ಒಂದು ಮಾಡಿದ್ದಾನೆ. ಹೌದು. ಎರಡು ಕುಟುಂಬದ ಪಾಲಿಗೆ ಆಪತ್ಬಾಂಧವನಾಗಿ ಬಂದಿದ್ದಾನೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಈ ಅಪರೂಪದ ಮದುವೆ ನಡೆದಿದ್ದು, ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿ ಜ್ಯೋತೆಪ್ಪ ಉಮರಾಣಿ ನೆಚ್ಚಿನ ಮಗಳಾದ ಸ್ವಾತಿ ಮದುವೆ ಮಾಡಲು ಆಗದೇ ಕೊರಗುತ್ತಿದ್ದರು. ಸುಂದರತೆಯಲ್ಲಿ ಅಪ್ಸರೆಯಂತಿದ್ದ ಸ್ವಾತಿಗೆ ಹುಟ್ಟಿನಿಂದ ಮಾತು ಬರಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
ಆದರೆ, ಪ್ರತಿಯೊಬ್ಬ ಅಪ್ಪನ ಕನಸಿನ ಹಾಗೆ, ಅದ್ಧೂರಿಯಾಗಿ ಮಗಳ ಮದುವೆ ಮಾಡಬೇಕೆಂದು ತಂದೆ ಜ್ಯೋತೆಪ್ಪ ತಾಯಿ ಪಾರ್ವತಿ ಕನಸು ಕಂಡಿದ್ದರು. ಆದರೆ, ಹಲವು ಕಡೆ ಸಂಬಂಧದ ಹುಡುಕಾಟದಲ್ಲಿ ತೊಡಗಿದ್ದರು. ಆದ್ರೆ ಮಾತು ಬರಲ್ಲ ಎಂಬ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪಿರಲಿಲ್ಲ.
ಮೂಗ ಯುವಕರು ಸಹ ತಾವು ಮೂಗ ಯುವತಿಯನ್ನೇ ಮದುವೆಯಾದ್ರೆ ಕಷ್ಟ ಆಗುತ್ತೆ ಅಂತಾ ಹಿಂದೇಟು ಹಾಕಿದ್ರು ಅನಿಸುತ್ತೆ. ಇದೇ ಕೊರಗಿನಲ್ಲಿದ್ದ ಇವರ ನೆರವಿಗೆ ಬಂದಿದ್ದು ಮತ್ತೋರ್ವ ಮೂಗ ಯೋಗೇಶ್ ಉಮರಾಣಿ. ಈ ಯೋಗೇಶ್ ಉಮರಾಣಿ ತನ್ನ ಸ್ನೇಹಿತ ಮುಗಳಖೋಡ ನಿವಾಸಿ ಸಿದ್ದುಗೆ ವಾಟ್ಸಪ್ ಮೂಲಕ ಫೋಟೋ ಬಯೋಡೇಟಾ ಕಳಿಸಿದ್ದಾನೆ. ಬಳಿಕ ಇಬ್ಬರ ಕುಟುಂಬಗಳು ಪರಸ್ಪರ ಒಪ್ಪಿ ಹಾರೂಗೇರಿಯಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ.
ಮಗಳ ಮದುವೆ ಬಳಿಕ ಮಾತನಾಡಿದ ಅಪ್ಪ ‘ಮಗಳನ್ನು ಮದುವೆ ಮಾಡಿಕೊಡಬೇಕೆಂದು ತೋರಿಸಿದಾಗ ಯಾರೂ ಹೆಚ್ಚು ಮುಂದೆ ಬಂದಿರಲಿಲ್ಲ. ಈಗ ಮದುವೆಯಾಗುತ್ತಿರೋದು ಖುಷಿ ತಂದಿದೆ’ ಎಂದರು. ಇನ್ನು ವಧುವಿನ ಸಹೋದರ ರಮೇಶ್ ಮಾತನಾಡಿ ‘ಮಾತನಾಡಲು ಬರದವನೇ ಈ ಸಂಬಂಧ ಕೂಡಿಸಿದ್ದಾನೆ. ಇಂತಹ ಮದುವೆ ನಾನು ಜೀವನದಲ್ಲಿಯೇ ನೋಡಿಲ್ಲ. ವರನ ಸ್ನೇಹಿತ ಮೂಗನಿದ್ದಾನೆ. ಅವನೇ ಈ ಸಂಬಂಧ ಕೂಡಿಸಿದ್ದು ಇಬ್ಬರು ಚೆನ್ನಾಗಿರಲಿ’ ಅಂತಾ ಭಾವುಕರಾಗಿದ್ದಾರೆ.
ಒಟ್ಟಾರೆ ಮಾತಿಗಿಂತ ಸಹಬಾಳ್ವೆ ಮುಖ್ಯ ಎಂಬುದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾಗಿದೆ ಈ ಜೋಡಿ.