ಬೆಳ್ತಂಗಡಿ । ಅಜ್ಜಿಯ ಕಿವಿ ಹರಿದು ಚಿನ್ನ ಹೊತ್ತೊಯ್ದ ದರೋಡೆಕೋರನ ಬಂಧನ ! | ಆರೋಪಿ ಯಾರೆಂದು ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ !

ಬೆಳ್ತಂಗಡಿ : ಹಾಡುಹಗಲೇ ಅಸಹಾಯಕ ವೃದ್ಧೆಯೊಬ್ಬರ ಕಿವಿ ಹರಿದು ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.

 

ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂಬ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿತ್ತು. ಅಸಹಾಯಕ ಅಜ್ಜಿಯ ಮೇಲೆ ನಡೆದ ಈ ಹೀನಾಯ ಕೃತ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದರು. ಈಗ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಬೇರೆ ಯಾರೂ ಆಗಿರದೆ, ಕೊಲೆ ಆದ ಅಕ್ಕು ಅಜ್ಜಿಯ ಹತ್ತಿರದ ಸಂಬಂಧಿ. ಆರೋಪಿಯ ಹೆಸರು ಅಶೋಕ ಎನ್ನಲಾಗಿದೆ. ಅಶೋಕನ ಚಿಕ್ಕಮ್ಮನನ್ನು ಅಜ್ಜಿಯ ಮಗನಿಗೆ ಮದುವೆ ಮಾಡಿಕೊಡಲಾಗಿತ್ತು. ಹಾಗಾಗಿ ಆತ ಮನೆಗೆ ಬಂದು ಹೋಗುತ್ತಿದ್ದ. ಕಳೆದ 3 ದಿನಗಳಿಂದ ಆತ ಮನೆಗೆ ಪದೇ ಪದೇ ಬಂದು ಹೋಗುತ್ತಿದ್ದ. ಆರೋಪಿ ಅಶೋಕನು ಐಸ್ ಕ್ರೀಮ್ ಲೈನ್ ಸೇಲ್ ವ್ಯಾನಿನಲ್ಲಿ ಕೆಲಸಮಾಡುತ್ತಿದ್ದ. ಆರೋಪಿ ಅಶೋಕನ ಚಿಕ್ಕಮ್ಮನ ಮಗ, ಅಂದರೆ, ಈಗ ಸತ್ತ ಅಜ್ಜಿಯ ಮೊಮ್ಮಗ ಕೂಡಾ ಅದೇ ಐಸ್ ಕ್ರೀಮ್ ಲೈನ್ ಸೇಲ್ ನ ವಾಹನದಲ್ಲಿ ಕೆಲಸ ಮಾಡುತ್ತಿದ್ದಾನೆ.

ಮೊನ್ನೆಯಿಂದ ಅಜ್ಜಿಯ ಮನೆಗೆ ಬಂದು ಆತ ಸರ್ವೇ ಮಾಡಿ ಹೋಗಿದ್ದ ಈತ, ಇವತ್ತು ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ ಕಳ್ಳ ಹೆಜ್ಜೆಯಲ್ಲಿ ಬಂದಿದ್ದ. ಇಂದು ಮಧ್ಯಾಹ್ನದ ವೇಳೆ ಅಕ್ಕು ಅವರು ಮನೆಯಲ್ಲಿ ಒಬ್ಬರೇ ಇದ್ದರು. ಉಳಿದವರೆಲ್ಲರೂ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೇ ಹೋಗಿದ್ದರು. ಇದನ್ನು ಗುರಿಯಾಗಿಸಿಕೊಂಡ ಆತ, ಅಜ್ಜಿಯ ಕಿವಿಗೆ ಕೈಹಾಕಿ ಚಿನ್ನ ಎಳೆದಿದ್ದ. ಮನೆಗೆ ನುಗ್ಗಿ ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಮನೆಯಲ್ಲಿದ್ದ ನಗದು ಗಬರಿಕೊಂಡು ಹೋಗಿದ್ದಾನೆ. ಕಿವಿಯ ಹಾಳೆಯನ್ನೇ ಹರಿದು ಹಾಕಿ ಹೋದವನು ಅವರು ಹಾಕಿಕೊಂಡಿದ್ದ ಚಿನ್ನವನ್ನು ಕಿತ್ತುಕೊಂಡು ಹೋಗದೆ ಬಿಟ್ಟಾನೆಯೇ ? ಇರೋ ಬರೋದನ್ನೆಲ್ಲ ಬಾಚಿಕೊಂಡು ಹೋಗಿದ್ದಾನೆ. ಹಾಗೆ ತೀವ್ರವಾದ ಪೆಟ್ಟುಗಳಾದ ಕಾರಣ ವೃದ್ಧೆ ಮೃತಪಟ್ಟಿದ್ದಾರೆ. ಅವರ ಶವ ಮನೆಯ ಹಿಂದಿನ ಕೊಟ್ಟಿಗೆಯ ಸಮೀಪ ಬಿದ್ದಿತ್ತು.

ಸೊಸೆ ಮತ್ತು ಮಗ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಮಧ್ಯಾಹ್ನದ ವೇಳೆ ಮೃತರ ಮೊಮ್ಮಗಳು ಮನೆಗೆ ಬಂದಾಗ, ಊಟದ ಬಟ್ಟಲು ಬಿದ್ದು ಎಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಮನೆಯಲ್ಲಿ ಅಜ್ಜಿ ಇಲ್ಲದನ್ನು ಗಮನಿಸಿ ಹುಡುಕಾಡಿದಾಗ, ಮನೆಯ ಹೊರಗೆ ಹಟ್ಟಿಯ ಬಳಿ ಬಿದ್ದಿದ್ದರು. ವೃದ್ಧೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕಿವಿ ಹರಿದು ಹೋಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜಿಯನ್ನು ಕಂಡು ಭಯಭೀತಳಾದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ.

ಆತ ಮೊದಲಿಗೆ ಗೋದ್ರೇಜ್ ಗೆ ಕೈ ಹಾಕಿದ್ದ. ಅದರಲ್ಲಿ ಕೇವಲ ಒಂದು ಸಾವಿರ ರೂಪಾಯಿ ಸಿಕ್ಕಿತ್ತು. ನಂತರ ಮನೆಯ ಬಂಗಾರಕ್ಕೆ ಕಣ್ಣು ಹಾಕಿದ್ದ ಆರೋಪಿ. ಆಗ ಅದು ಅಜ್ಜಿ ಅಕ್ಕಮ್ಮನವರ ಗಮನಕ್ಕೆ ಬಂದಿತ್ತು ಎನ್ನಲಾಗಿದೆ. ಅವರು ತಕ್ಷಣ ಈ ವಿಚಾರವನ್ನು ಪಕ್ಕದ ಮನೆಯವರಿಗೆ ತಿಳಿಸಲು ಕುಂಟುತ್ತಾ ಹೋಗಿದ್ದಾರೆ. ಆಗ, ಇನ್ನೇನು ತನ್ನ ವಿಚಾರ ತಿಳಿದು ಬರುತ್ತದೆ ಎಂದು ಆತಂಕಗೊಂಡ ಆರೋಪಿಯು, ಮರದ ತುಂಡು ತಗೆದುಕೊಂಡು ತಲೆಯ ಹಿಂಬದಿಗೆ ಜೋರಾಗಿ ಏಟು ನೀಡಿದ್ದಾನೆ ಎನ್ನಲಾಗಿದೆ. ಮೊದಲೇ ಅಶಕ್ತ ವೃದ್ಧೆ ಅಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಅಜ್ಜಿಯ ಕಿವಿಗೆ ಕೈಹಾಕಿ ಕಿವಿಯ ಬೆಂಡೋಲೆ ಸೆಳೆದಿದ್ದಾನೆ. ಅಜ್ಜಿಯ ಸರವನ್ನು ಕೂಡಾ ಕಿಸೆಗೆ ತುರುಕಿಕೊಂಡು ಆತ ಸೀದಾ ಉಜಿರೆಗೆ ಹೋಗಿದ್ದಾನೆ. ನಂತರ ಅಲ್ಲೇ, ಉಜಿರೆಯಲ್ಲಿ ಒಂದು ಜೆವೆಲ್ ಶಾಪಿನಲ್ಲಿ ಬೆಂಡು ಅಡವಿಟ್ಟು, ಐದು ಸಾವಿರ ಅಡ್ವಾನ್ಸ್ ಪಡಕೊಂಡು ಒಂದಷ್ಟು ಮದ್ಯ ಸೇವಿಸಿದ್ದಾನೆ. ಅಲ್ಲದೆ ಕ್ವಾರ್ಟರ್ ಮದ್ಯದ ಬಾಟಲಿ ಖರೀದಿಸಿ ತನ್ನ ಪಾಡಿಗೆ ಕಡಿರುದ್ಯಾವರ ಗ್ರಾಮದ ತನ್ನ ಮನೆಗೆ ಹೋಗಲು ಆಟೋ ಹತ್ತಿದ್ದಾನೆ. ಆತ ಅಲ್ಲಿಗೆ ತಲುಪುವ ಹಾಗೇ, ಧರ್ಮಸ್ಥಳದ ದಕ್ಷ ಪೊಲೀಸರು ಆರೋಪಿಯ ಹೆಜ್ಜೆ ಜಾಡನ್ನು ಪತ್ತೆ ಮಾಡಿದ್ದರು. ಸ್ಥಳೀಯ ವ್ಯಕ್ತಿಯೊಬ್ಬರ ಟಿಪ್ ಆಫ್ ನೆರವಿನಿಂದ ಸೋಮಂತಡ್ಕಎಂಬಲ್ಲಿ ಆರೋಪಿಯನ್ನು ಹಿಡಿಯಲಾಗಿದೆ.

ಸುದ್ದಿ ತಿಳಿದ ಮಗ ಸೊಸೆ ಬಂದು ನೋಡಿದಾಗ ಅಕ್ಕು ಅಜ್ಜಿ ಅವರು ಮೃತಪಟ್ಟಿದ್ದರು. ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಗೊತ್ತಾಗಿದೆ. ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನನಡೆಸಿ ಆರೋಪಿಯನ್ನು ಗುರುತಿಸಿ ಈಗ ಹಿಡಿದು ಹಾಕಿದ್ದಾರೆ. ಆರೋಪಿ ಅಶೋಕ ಬೆಳ್ತಂಗಡಿ ತಾಲೂಕಿನ ಕಾನರ್ಪದವನಾಗಿದ್ದು, ಈಗ ಆತನನ್ನು ಸೋಮಂದಡ್ಕದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ದರೋಡೆ ಮತ್ತು ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಸ್ಥಳ ಮಹಜರು ನಿಮಿತ್ತ ಬ್ಯಾರಿಕೇಡ್ ಅಳವಡಿಸಿದ್ದಾರೆ. ಶವವನ್ನು ಇನ್ನೂ ಪೋಸ್ಟ್ ಮಾರ್ಟಮ್ ಗೆ ಕಳುಹಿಸಿಲ್ಲ. ಶವವನ್ನು ಮಂಗಳೂರಿಗೆ ಪೋಸ್ಟ್ ಮಾರ್ಟಮ್ ಗಾಗಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಬೆರಳಚ್ಚ್ಚು ತಜ್ಞರು ಮತ್ತು ಪೊಲೀಸ್ ಸ್ಕ್ವಾಡ್ ಆಗಮಿಸಿದ್ದು, ಪೊಲೀಸ್ ನಾಯಿಗಳು ಸಾಕ್ಷ್ಯ ಸಂಗ್ರಹೀಕರಿಸುವ ಕೆಲಸ ಮಾಡುತ್ತಿವೆ. ಧರ್ಮಸ್ಥಳ ಪೋಲೀಸರ ಕ್ಷಿಪ್ರ ಮಿಂಚಿನ ವೇಗದ ಚಾಣಾಕ್ಷ ಕಾರ್ಯಾಚರಣೆಗೆ ಸ್ಥಳೀಯ ಗ್ರಾಮಸ್ಥರು ಶಬಾಷ್ ಹೇಳುತ್ತಿದ್ದಾರೆ.

Leave A Reply

Your email address will not be published.