ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿದ ಜನ, ಕಾರಣ ಮಾತ್ರ ವಿಚಿತ್ರ!!
ಮಳೆಯ ಅಬ್ಬರಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಕಂಗಾಲಾಗಿದ್ದು, ಎಂದು ಮಳೆ ಕಡಿಮೆಯಾಗುತ್ತದೆ ಎಂದು ಕಾದು ಕೂತಿದ್ದಾರೆ. ಆದರೆ ಇಲ್ಲೊಂದು ಕಡೆ ಮಳೆಗಾಗಿ ವಿಶೇಷ ಪೂಜೆಯೊಂದನ್ನು ಮಾಡಿದ್ದಾರೆ.
ಒಂಚೂರು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ, ವಿಜಯಪುರ ನಗರದ ಈ ಗ್ರಾಮದಲ್ಲಿ ಒಂದು ಹನಿ ಮಳೆ ಕೂಡ ಆಗದ ಕಾರಣ, ಮಳೆಯಿಲ್ಲದೆ ಜನರು ಕಂಗಾಲಾಗಿದ್ದಾರೆ. ಹೀಗಾಗಿ, ಈ ವಿಶಿಷ್ಟ ಆಚರಣೆ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ. ಆದರೆ ಈ ಆಚರಣೆ ಮಾತ್ರ ಆಶ್ಚರ್ಯವಾಗುವಂತೆ ಇದೆ ಎಂದರೆ ತಪ್ಪಾಗಲಾರದು. ಅದೇನು ಆಚರಣೆ ಎಂಬುದನ್ನು ಮುಂದೆ ಓದಿ..
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಈ ಆಚರಣೆ ನಡೆದಿದ್ದು, ಇಲ್ಲಿ ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಿರುವಂತಹ ಘಟನೆ ಕಳೆದ ಶುಕ್ರವಾರ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸ್ಮಶಾನದಲ್ಲಿ ಶವ ಹೂತಿರೋ ಸ್ಥಳದಲ್ಲಿ ಎರಡು ಅಡಿ ಮಣ್ಣು ತೆಗೆದು ಗ್ರಾಮಸ್ಥರು ನೀರು ಹಾಕಿದರು. ಟ್ಯಾಂಕರ್ ಮೂಲಕ ಶವದ ಮೇಲೆ ಜನರು ನೀರು ಹಾಕಿದ್ದು, ಕೆಲ ಶವಗಳು ಬಾಯಿ ಬಿಟ್ಟಿರುತ್ತವೆ. ಅಂಥ ಶವಗಳ ಬಾಯಿಗೆ ನೀರು ಹಾಕೋ ಪದ್ಧತಿ ಇದಾಗಿದೆ. ಎಲ್ಲೆಲ್ಲಿ ಶವ ಬಾಯಿ ಬಿಟ್ಟಿವೆ ಎಂದು ವ್ಯಕ್ತಿ ಹೇಳಿದ್ದು, ಕೆಲ ಶವಗಳ ಹೂತಿರೋ ಸ್ಥಳದಲ್ಲಿ ಎರಡು ಅಡಿ ಅಗೆದು ಸ್ಥಳೀಯರು ನೀರು ಹಾಕಿದ್ದಾರೆ.
ಇದೆಂತಹ ಆಚರಣೆಯಪ್ಪಾ? ಇವರ ಆಚರಣೆಯಿಂದಾಗಿ ಮಳೆ ಬರಬಹುದಾ ಎಂದು ನೀವು ಅಂದುಕೊಂಡಿರಬಹುದು. ಆದರೆ, ಇಲ್ಲಿ ವಿಶೇಷವೆಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ಹನಿಹನಿ ಮಳೆ ಆರಂಭವಾಗಿದೆ. ಒಟ್ಟಾರೆ, ಇವರ ಈ ಪ್ರಾರ್ಥನೆಯಿಂದ ಮಳೆ ಬಂದಿತೇ ಅಥವಾ ನೈಸರ್ಗಿಕವಾಗಿ ಮಳೆ ಬಂದಿದೆಯೋ ಎಂಬುದು ತಿಳಿಯದ ಸಂಗತಿಯಾಗಿದೆ..