ಕಾಣಿಯೂರು : ಬೈತಡ್ಕ ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು,ನೀರು ಪಾಲು ಶಂಕೆ?

Share the Article

ಕಡಬ : ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ.ಈ ಕುರಿತು ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು ಎನ್ನಲಾಗಿದೆ. ಅಪಘಾತದ ಸ್ಥಳದಲ್ಲಿ ಕಾರಿನ ಬೋನೆಟ್ ಒಂದು ಭಾಗ ಮಾತ್ರ ದೊರಕಿದ್ದು, ಅದು ಮಾರುತಿ 800 ಕಾರಿನದ್ದು ಎನ್ನಲಾಗಿದೆ.
ಅಪಘಾತದ ತೀವ್ರತೆ ಹೇಗಿತ್ತು ಅಂದರೆ, ಸೇತುವೆಯ ತಡೆಬೇಲಿಯ ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ.

ಈ ಅಪಘಾತ ಸಂಭವಿಸಿದ ಸ್ಥಳವು ತುಂಬಾ ಅಪಾಯಕಾರಿ ತಿರುವು ಹೊಂದಿದ್ದು, ಇಳಿಜಾರಿನಲ್ಲಿ ವೇಗವಾಗಿ ಬರುವವರಿಗೆ ಆ ತಿರುವು ಗೋಚರಿಸದಷ್ಟು ಅಪಾಯಕಾರಿಯಾಗಿದೆ. ಈ ಹಿಂದೆ 3 ವಾಹನಗಳು ಇದೇ ಸ್ಥಳದಲ್ಲಿ ಹೊಳೆಗೆ ಬಿದ್ದಿದ್ದವು.

ಬೆಳ್ಳಂಬೆಳಗ್ಗೆ ಅಪಾರ ಜನ ಸೇರಿ ನದಿಯ ಎರಡೂ ಬದಿಯಲ್ಲಿ ಹುಡುಕಾಡಿದರೂ, ಕಾರು ಪತ್ತೆಯಾಗಿಲ್ಲ. ಕಾರಿನಲ್ಲಿ ಎಷ್ಟು ಜನ ಇದ್ದರು, ಕಾರು ಯಾರದ್ದು ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
Leave A Reply