ಬೆಕ್ಕನ್ನು ನುಂಗಿ ಪರದಾಡುತ್ತಿದ್ದ ಹೆಬ್ಬಾವು!!
ಮಂಗಳೂರು: ಇಲ್ಲಿನ ಹೊರವಲಯದ ನಿಡ್ಡೋಡಿ ಎಂಬಲ್ಲಿ ಬೆಕ್ಕೊಂದನ್ನು ತಿಂದು ಮನೆಯಂಗಳದಲ್ಲಿದ್ದ ಬೃಹತ್ ಆಕಾರದ ಹೆಬ್ಬಾವನ್ನು ಉರಗ ಪ್ರೇಮಿ ವಿನೇಶ್ ಪೂಜಾರಿ ಅವರು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆಯೊಂದು ಜುಲೈ 07 ರಂದು ನಡೆದಿದೆ.
ನಿಡ್ಡೋಡಿ ನಿವಾಸಿಯೊಬ್ಬರ ಮನೆ ಸಮೀಪವೇ ಕಾಣಸಿಕ್ಕ ಸುಮಾರು 65-70 ಕೆಜಿ ತೂಕದ ಬೃಹತ್ ಆಕಾರದ ಹೆಬ್ಬಾವು ಯಾವುದೋ ಪ್ರಾಣಿಯನ್ನು ತಿಂದು ಅತ್ತಿತ್ತ ಹೋಗಲಾರದೇ ಪರದಾಡುತ್ತಿತ್ತು. ಹಾವನ್ನು ಕಂಡು ಗಾಬರಿಗೊಂಡ ಮನೆಮಂದಿ ಹಾಗೂ ಸ್ಥಳೀಯರು ಹಾವು ಹಿಡಿಯುವ ಪ್ರಯತ್ನ ನಡೆಸಿದ್ದು, ಬೃಹತ್ ಅಕಾರದ ಹೆಬ್ಬಾವು ಆಗಿದ್ದರಿಂದ ಅಸಾಧ್ಯವಾಗಿತ್ತು.
ಕೂಡಲೇ ಹಾವು ಬಂದ ವಿಚಾರವನ್ನು ಸ್ಥಳೀಯ ನಿವಾಸಿ, ಉರಗ ಪ್ರೇಮಿ, ವಿನೇಶ್ ಪೂಜಾರಿ ಅವರ ಗಮನಕ್ಕೆ ತಂದಿದ್ದು ಬಳಿಕ ಮನೆ ಬಳಿ ತೆರಳಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಮರಳಿಸಿದ್ದಾರೆ. ಹೆಬ್ಬಾವು ಬೆಕ್ಕೊಂದನ್ನು ತಿಂದ ಪರಿಣಾಮ ಜೀರ್ಣಸಿಕೊಳ್ಳಲು ಅತ್ತಿಂದಿತ್ತಾ ಅಲೆದಾಡಿದ್ದನ್ನು ಕಂಡ ಮನೆ ಮಂದಿ ಗಾಬರಿಗೊಂಡರೆ, ಹಾವು ಹಿಡಿಯುವ ದೃಶ್ಯವನ್ನು ಕಾಣಲು ಕುತೂಹಲಿಗರ ಗುಂಪೇ ನೆರೆದಿತ್ತು.
ಉರಗ ಪ್ರೇಮಿ ವಿನೇಶ್ ಈ ಮೊದಲು ಸುಮಾರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಮರಳಿಸಿದ್ದು, ಅದಲ್ಲದೇ ಅಪರೂಪದ ಸಸ್ಯಗಳ, ಔಷಧಿಯ ಗುಣವಿರುವ ಗಿಡ-ಗಂಟಿಗಳ, ಪಕ್ಷಿ ಸಂಕುಲಗಳ ಉಳಿಸಿ ಬೆಳೆಸುತ್ತಿರುವ ಅಪರೂಪದ ಪ್ರತಿಭೆಯಾಗಿಯೂ ಗುರುತಿಸಿಕೊಂಡಿದ್ದಾರೆ.