ಡೈಲಿ ಬೀರು ಕುಡಿಯೋದು ಕೆಟ್ಟದು ಅಂತ ಸಾಮಾನ್ಯ ಅಭಿಪ್ರಾಯನಾ : ಅಧ್ಯಯನ ಎನ್ ಹೇಳುತ್ತೆ ಗೊತ್ತಾ ?
ಬೀರಬಲ್ಲರಿಗೆ ಒಂದು ಒಳ್ಳೆಯ ಹೊಸ ಜೋಕ್ ಕೇಳಿದಷ್ಟು ಖುಷಿ. ಯಾಕಂದ್ರೆ ಇದು ಬೀರಿನ ವಿಷ್ಯ, ಬೀರು ಹೀರಲು ಪ್ರೇರೇಪಿಸುವ ವಿಷ್ಯ.
ಪ್ರತಿದಿನ ಒಂದು ಬಿಯರ್ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಅನ್ನುತ್ತದೆ ಒಂದು ಸಂಶೋಧನೆ. ಪೋರ್ಚುಗಲ್ ನ ಲಿಸ್ಬನ್ ನ ನೋವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆಯಲ್ಲಿ ಈ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಪ್ರತಿದಿನ ರಾತ್ರಿ ಊಟದೊಂದಿಗೆ ಬಿಯರ್ ಕುಡಿಯುವುದರಿಂದ ಪುರುಷರ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಪ್ರಯೋಜನವು ಆಲ್ಕೊಹಾಲಿಕ್ ಮತ್ತು ಆಲ್ಕೋಹಾಲಿಕ್ ಅಲ್ಲದ ಬಿಯರ್ ಎರಡರಿಂದಲೂ ಬರುತ್ತದೆ ಎಂದು ಅದು ಹೇಳಿದೆ.
ವಯಸ್ಕ ಪುರುಷರನ್ನು ಸಂಶೋಧನೆಯಲ್ಲಿ ಬಳಸಿಕೊಳಲಾಯ್ತು. ಅವರ ಸರಾಸರಿ ವಯಸ್ಸು 35 ವರ್ಷಗಳು. 4 ವಾರಗಳವರೆಗೆ ಪ್ರತಿದಿನ ರಾತ್ರಿಯ ಊಟದೊಂದಿಗೆ 325 ಮಿಲಿ ಲಾಗರ್ ಅನ್ನು ಕುಡಿಯಲು ಎಲ್ಲಾ ಜನರನ್ನು ವಿನಂತಿಸಲಾಯಿತು. ಸಾರಿ, ವಿನಂತಿ-ಗಿನಂತಿ ಎಂದದ್ದೂ ಇಲ್ಲ, ಉಚಿತ ಬೀರ್ ಸಿಗುತ್ತೆ ಅಂತ ಎಲ್ರೂ ಸರ್ಯಾದ ಟೈಮ್ ಗೆ ಹಾಜರ್ ಆಗಿ ಬೀರು ಹೀರಲು ಬರ್ತಿದ್ರಂತೆ.
ಸ್ಪರ್ಧಿಗಳಲ್ಲಿ ಕೆಲವರಿಗೆ ಆಲ್ಕೋಹಾಲ್ ಮತ್ತು ಕೆಲವು ಆಲ್ಕೋಹಾಲ್ ರಹಿತ ಬಿಯರ್ ನೀಡಲಾಯಿತು. ಆಲ್ಕೊಹಾಲ್ ಲ್ಯಾಗರ್ ನಲ್ಲಿ ಆಲ್ಕೋಹಾಲ್ ಅಂಶವು 5.2% ರಷ್ಟಿತ್ತು. ಅಂತಹ ಬಿಯರ್ ಅನ್ನು ಬಲವಾದ ವರ್ಗದಲ್ಲಿ ಇಡಲಾಗುತ್ತದೆ. ಪ್ರಯೋಗದ 4 ವಾರಗಳ ನಂತರ, ಈ ಪುರುಷರ ಮಲ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಯಿತು.
ಸಂಶೋಧನೆಯ ಫಲಶ್ರುತಿ ಏನು?
ಈ ಸಂಶೋಧನೆಯ ಫಲಿತಾಂಶಗಳು ಬಿಯರ್ ಕುಡಿಯುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ತೋರಿಸಿವೆ. ಈ ಬ್ಯಾಕ್ಟೀರಿಯಾಗಳು ಹೆಚ್ಚು ವೈವಿಧ್ಯಮಯವಾಗಿವೆ. ಇದು ಇಡೀ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಈ ವಿಚಾರ ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿಯಲ್ಲಿ ಪ್ರಕಟವಾಗಿದೆ.
ಪ್ರತಿದಿನ ಬಿಯರ್ ಕುಡಿಯುವುದರಿಂದ ಒಬ್ಬರ ತೂಕ ಅಥವಾ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೆಚ್ಚಾಗುವುದಿಲ್ಲ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ರಕ್ತ, ಹೃದಯ ಮತ್ತು ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯೂ ಬರೋದಿಲ್ಲ.
ಬಿಯರ್ ಉತ್ತಮ ಬ್ಯಾಕ್ಟೀರಿಯಾವನ್ನು ಹೇಗೆ ಹೆಚ್ಚಿಸುತ್ತದೆ?
ಬಿಯರ್ ನಲ್ಲಿ ಪಾಲಿಫಿನಾಲ್ ಗಳು ಎಂದು ಕರೆಯಲ್ಪಡುವ ಸಂಯುಕ್ತಗಳು ಸೂಕ್ಷ್ಮಾಣುಜೀವಿಗಳು ಇರುತ್ತವೆ ಎಂದು ವಿಜ್ಞಾನಿಗಳು ತಿಳಿದಿದ್ದಾರೆ , ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ವೈವಿಧ್ಯಮಯ ಶ್ರೇಣಿಯ ಬ್ಯಾಕ್ಟೀರಿಯಾಗಳನ್ನು ಹೊಂದಿರುವುದು ಮುಖ್ಯವಾಗಿದೆ. ಹೀಗಾಗಿ ಆರೋಗ್ಯಕ್ಕೆ ಬಿಯರ್ ಹಾನಿಕಾರಕವಲ್ಲ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ. ಬಿಯರ್ ಕುಡಿಯದಿದ್ದರೇ ಹೃದ್ರೋಗ ಮತ್ತು ಮಧುಮೇಹದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದೆ ಈ ಸಂಶೋಧನೆ.
ಬಿಯರ್ ಬಲ್ಲವರೇ, ಶಾಸನ ವಿಧಿಸಿದೆ ಎಚ್ಚರಿಕೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಬಿಯರ್ ಕುಡಿಯುವ ಮುನ್ನ, ಇನ್ನಷ್ಟು ಅಧ್ಯಯನ ಮಾಡಣ್ಣ.