ಈ ಊರಿನಲ್ಲಿ ಬೆಕ್ಕೇ ಗ್ರಾಮದೇವತೆ ! ಇಲ್ಲಿ ಮಾರ್ಜಾಲ ವಿಶೇಷ ಪೂಜೆ
ಹಲವರು ಬೆಕ್ಕನ್ನು ಮನೆ ಸದಸ್ಯನಂತೆ ಸಾಕಿ ಸಲುಹುತ್ತಾರೆ. ಆದ್ರೆ ಕೆಲವರಿಗೆ ಈ ಬೆಕ್ಕು ಅಪಶಕುನ. ಆದರೆ ಮಂಡ್ಯದ ಬೆಕ್ಕಳೆಲೆ ಗ್ರಾಮದಲ್ಲಿ ಬೆಕ್ಕಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮಾರ್ಜಾಲಕ್ಕೆ ದೇವಾಲಯವನ್ನು ಕಟ್ಟಿ ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ.
ಬೆಕ್ಕು ಗ್ರಾಮದೇವತೆ ಆಗಿರುವುದರಿಂದ ಈ ಗ್ರಾಮಕ್ಕೆ ಬೆಕ್ಕಳಲೆ ಎಂಬ ಹೆಸರು ಬಂದಿದೆ. ಹಲವು ವರ್ಷಗಳ ಹಿಂದೆ ಸಮಾಧಿ ಮಾಡಲಾದ ಬೆಕ್ಕಿನ ಗದ್ದುಗೆಗೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ಕೂಡ ಇಲ್ಲಿ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುವ ಸಂಪ್ರದಾಯ ಕೂಡ ಇದೆ.
ಬೆಕ್ಕಿಗೆ ದೇವಾಲಯವನ್ನೇ ಕಟ್ಟಿರುವ ಗ್ರಾಮಸ್ಥರು ಬೆಕ್ಕಿನ ಮಂಗಮ್ಮ ಹೆಸರಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ. ಗ್ರಾಮದಲ್ಲಿ ಯಾವುದೇ ಬೆಕ್ಕು ಸತ್ತರು ಮನುಷ್ಯರಂತೆ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಅಷ್ಟೇ ಅಲ್ಲದೇ ಬೆಕ್ಕಿಗೆ ಹೊಡೆಯುವುದು ಬಡಿಯುವುದು ಈ ಗ್ರಾಮದಲ್ಲಿ ನಿಷೇಧ. ಈ ಜನರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಬೆಕ್ಕಿನ ದರ್ಶನ ಪಡೆಯುವುದನ್ನ ರೂಢಿಸಿಕೊಂಡಿದ್ದಾರೆ.