ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಡೌನ್ ಎಂಬ ಭೂತ
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಈಗ ಸರ್ವರ್ ಸಮಸ್ಯೆ. ಯಾವಾಗ ನೋಡಿದರೂ ಒಂದಲ್ಲ ಒಂದು ಕಾರಣಕ್ಕೆ ಸರ್ವರ್ ಇರೋದಿಲ್ಲ. ಅಲ್ಲಿನ ಯಾವುದೇ ಗವಾಕ್ಷಿಗಳಲ್ಲಿ ಬಗ್ಗಿ ಮುಖ ತೂರಿ ಕೇಳಿದರೂ” ಸರ್ವರ್ ಡೌನ್” ಎಂಬ ಸ್ಟ್ಯಾಂಡರ್ಡ್ ಉತ್ತರ ತಕ್ಷಣ ಲಭ್ಯ !
ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಡೌನ್ ಆಗಿದ್ದು, ಇದರ ಪರಿಣಾಮ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದು ಅಲೆದು ಹೈರಾಣಾಗಿ ಹೋಗುತ್ತಿದ್ದಾರೆ. ಇರುವ ಕೃಷಿ ಕಾರ್ಯ ಕೆಲಸ ಬಿಟ್ಟು, ಬೇರೆ ಕಡೆ ಕೆಲಸ ಮಾಡುತ್ತಿದ್ದವರು ಅರ್ಧ ದಿನ ರಜೆ ಅಥವಾ ಪೂರ್ತಿ ದಿನ ಹಾಕಿ ಸರ್ಕಾರದ ಕೆಲಸ ದೇವರ ಕೆಲಸ ಸ್ಥಳಕ್ಕೆ ಬಂದ್ರೆ, ಸರ್ವರ್ ಇರೋದಿಲ್ಲ.
ಯಾವುದೇ ಕಾಗದ ಪತ್ರ ಸರ್ವರ್ ಇಲ್ಲದೆ ಪ್ರಿಂಟರ್ ನಿಂಡ ಹೊರ ಬರ್ತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈ ಮೊದಲು ಸಹ ಆಗಾಗ ಸರ್ವರ್ ಸಮಸ್ಯೆ ಎದುರಾಗುತ್ತಿತ್ತಾದರೂ ಸ್ವಲ್ಪ ಸಮಯದ ಬಳಿಕ ಸರಿಯಾಗುತ್ತಿತ್ತು. ಆದರೆ ಈ ಬಾರಿ ಕಳೆದ ಒಂದು ವಾರದಿಂದಲೂ ಈ ಸಮಸ್ಯೆ ತಲೆದೋರಿದ್ದು, ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಎನ್ನಲಾಗಿದೆ. ಅದರ ಜತೆ ಇನ್ನೂ ನೆಟ್ ಕೇಬಲ್ ಸಮಸ್ಯೆ. ಬಿಎಸ್ಎನ್ಎಲ್ ಇರೋ ತನಕ ಇಂಟರ್ ನೆಟ್ ಬರ್ಕತ್ ಆಗಲ್ಲ ಅನ್ನಿಸುತ್ತದೆ. ಆದರದು ಮುಗಿಯದ ಕಥೆ. ಸರ್ಕಾರಿ ಸಂಸ್ಥೆ ಎಂದು ಕಡ್ಡಾಯವಾಗಿ ಬಿಎಸ್ಎನ್ಎಲ್ ಬಳಸಲು ಆಜ್ಞೆಯೇ ಇದೆ. ಆದರೆ ಬಿಎಸ್ಎನ್ಎಲ್ ತನ್ನ ಲೈಫ್ ನಲ್ಲಿ ಅಪ್ಡೇಟ್ ಆಗಲ್ಲ ಅನ್ನಿಸುತ್ತದೆ.
ಇನ್ನು ಆಷಾಢಕ್ಕೂ ಮುನ್ನ ಆಸ್ತಿ ಖರೀದಿ ಮಾಡಿ ರಿಜಿಸ್ಟ್ರಾರ್ ಮಾಡಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿದ್ದವರು ಇದರಿಂದ ಬೇಸರಗೊಂಡಿದ್ದಾರೆ. ಜೊತೆಗೆ ಮಾರಾಟಗಾರರು ಅಥವಾ ಸಾಲ ಪಡೆಯುವವರು ಇಸಿ ಮತ್ತು ದೃಢೀಕರಣ ಪ್ರಮಾಣ ಪತ್ರ ಸಕಾಲಕ್ಕೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.