ದ.ಕ : ಮತ್ತೆ ಕಂಪಿಸಿದ ಭೂಮಿ, ಆತಂಕದಲ್ಲಿ ಜನತೆ, ಶಬ್ದದೊಂದಿಗೆ ಕಂಪಿಸಿದ ಭೂಮಿ
ಸುಳ್ಯ : ಎರಡು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ.
ಜೂ.28ರ ಮುಂಜಾನೆ 7.46 ರ ಸುಮಾರಿಗೆ ಕಂಪನವಾಗಿದ್ದು ಜನ ಭಯಬೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ. ತಾಲೂಕಿನ ಸುಳ್ಯ ಪಟ್ಟಣ, ಉಬರಡ್ಕ,ಮಿತ್ತೂರು, ಮಡಪ್ಪಾಡಿ, ಕೊಲ್ಲಮೊಗ್ರು, ದೇವಚಳ್ಳ ಜಾಲ್ಸೂರು, ಆಲೆಟ್ಟಿ, ಸೋನಂತೂರ್, ಕಲ್ಲುಗುಂಡಿ ಸೇರಿದಂತೆ ಬಹುತೇಕ ಕಡೆ ಭೂಮಿ ಕಂಪಿಸಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಮನೆಗಳಲ್ಲಿ ಸಾಕಿದ್ದ ಸಾಕು ಪ್ರಾಣಿಗಳು ಮಲಗಿದಲ್ಲಿಂದ ಎದ್ದು ಗಾಬರಿ ವ್ಯಕ್ತಪಡಿಸಿವೆ. ಕಬ್ಬಿಣದ ಸಲಕರಣೆ ಗಳ ಮೂಲಕ ಕಂಪನ ಚೆನ್ನಾಗಿ ಅನುಭವ ಆಗಿದೆ.
ಮತ್ತೆ ವಾರದ ಒಳಗೆ ಭೂಮಿ ಕಂಪಿಸಿದ್ದು ಆತಂಕ ಮೂಡಿಸಿದ್ದು, ಜನತೆ ಗಾಬರಿಯಲ್ಲಿದ್ದಾರೆ.
ತೀವ್ರತೆ ಹೆಚ್ಚಿದ ಭೂಕಂಪನವು ರಿಕ್ಟರ್ ಸ್ಕೇಲ್‌ನಲ್ಲಿ 3.0 ದಾಖಲಾಗಿದೆ.
ದಕ್ಷಿಣ ಕನ್ನಡ-ಕೊಡಗು ಗಡಿಯ ಚೆಂಬು ಕಂಪನದ ಕೇಂದ್ರವಾಗಿದೆ ಎಂದು ತಿಳಿದು ಬಂದಿದೆ.