ಮುಕ್ಕೂರು : ಯಕ್ಷಗಾನ ನಾಟ್ಯ ಕಲಿಕಾ ತರಬೇತಿ ಉದ್ಘಾಟನೆ
ಯಕ್ಷಗಾನ ಜಾತಿ, ಮತ, ಧರ್ಮ ಮೀರಿ ನಿಂತ ಕಲೆ : ಗೋಪಾಲಕೃಷ್ಣ ಪಠೇಲ್ ಚಾರ್ವಾಕ
ಯಕ್ಷಗಾನದಲ್ಲಿ ಜೀವನ ಮೌಲ್ಯದ ಸಂದೇಶ : ಸುಬ್ರಾಯ ಭಟ್ ನೀರ್ಕಜೆ
ಯುವ ಪೀಳಿಗೆಗೆ ಯಕ್ಷಗಾನದ ಮಹತ್ವ ತಿಳಿಸುವ ಪ್ರಯತ್ನ : ಜಗನ್ನಾಥ ಪೂಜಾರಿ ಮುಕ್ಕೂರು
ಮುಕ್ಕೂರು : ಸಂಗೀತ, ನೃತ್ಯ, ಸಾಹಿತ್ಯ, ವೇಷಭೂಷಣ ಸಹಿತ ಎಲ್ಲವನ್ನೂ ಒಳಗೊಂಡ ಏಕಮಾತ್ರ ಕಲೆ ಅಂದರೆ ಅದು ಯಕ್ಷಗಾನ. ಜಾತಿ, ಮತ, ಪಂಥ ಮೀರಿ ಆದ್ಯಾತ್ಮಿಕ, ಧಾರ್ಮಿಕ ಸಂದೇಶ ಸಾರುವ ಪ್ರಬುದ್ಧ ಕಲೆಯು ಹೌದು ಎಂದು ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಪಠೇಲ್ ಚಾರ್ವಾಕ ಹೇಳಿದರು.
ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಾವಿದರ ಸಹಯೋಗದೊಂದಿಗೆ ಮುಕ್ಕೂರು ಶಾಲಾ ವಠಾರದಲ್ಲಿ ಜೂ.18 ರಂದು ಯಕ್ಷಗಾನ ನಾಟ್ಯ ಕಲಿಕಾ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಏಳನೆ ಶತಮಾನದಲ್ಲಿ ಪ್ರಾರಂಭಗೊಂಡ ಈ ಕಲೆ ವಿವಿಧ ಪ್ರಕಾರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಶೇಣಿ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ ರಾವ್, ಶಿವರಾಮ ಹೆಗ್ಡೆ, ಸಾಮಗದ್ವಯರು ಸೇರಿದಂತೆ ಅನೇಕರು ಯಕ್ಷರಂಗದ ಉನ್ನತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದವರು ಸ್ಮರಿಸಿದರು.
ಯಕ್ಷಗಾನಕ್ಕೆ ಉತ್ತಮ ಭವಿಷ್ಯ ಇದೆ. ಅದು ಅಜರಾಮವಾಗಿ ಉಳಿಯುತ್ತದೆ. ಯಕ್ಷಗಾನ ಕಲಾವಿದನಿಗೆ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಇದ್ದು ಅಂತಹ ಕಲೆಯನ್ನು ಮಕ್ಕಳಿಗೆ ಕಲಿಸುವ ಪ್ರಯತ್ನಕ್ಕೆ ಯುವಕ ಮಂಡಲ ಸಹಯೋಗ ನೀಡಿರುವುದು ಶ್ಲಾಘನೀಯ ಸಂಗತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಜೀವನದಲ್ಲಿ ಹಣ ಗಳಿಕೆ ಮಾತ್ರ ಮುಖ್ಯ ಅಲ್ಲ. ನೈತಿಕತೆ, ಮೌಲ್ಯ, ಸತ್ಯ, ಧರ್ಮ ರೂಢಿಸಿಕೊಂಡಾಗ ಜೀವನಕ್ಕೆ ಅರ್ಥ ಬರುತ್ತದೆ. ಮೌಲ್ಯಯುತ ಜೀವನ ರೂಪಿಸಲು ಪೌರಾಣಿಕ ಕತೆ, ಹಿನ್ನೆಲೆಗಳನ್ನು ಅರಿಯುವುದು ಆವಶ್ಯಕ. ಯಕ್ಷಗಾನದಂತಹ ಕಲೆ ಒಂದು ಮಾಧ್ಯಮವಾಗಿ ಪೌರಣಿಕ ಹಿನ್ನೆಲೆಯನ್ನು ತಿಳಿಸುವಲ್ಲಿ ಉತ್ತಮ ವೇದಿಕೆ ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಅದ್ಯಕ್ಷ ಹಾಗೂ ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಮುಕ್ಕೂರು ಶಾಲೆಗೂ ಯಕ್ಷಗಾನಕ್ಕೂ ಅನನ್ಯ ಸಂಬಂಧ ಇದೆ. ಇಲ್ಲಿ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಸಾವಿರಾರು ಜನ ಸೇರುತ್ತಿದ್ದ ಇತಿಹಾಸ ಇದೆ ಎಂದ ಅವರು ಯಕ್ಷಗಾನ ಕಲಾವಿದರ ಬದುಕು, ಮಾತು, ವ್ಯಕ್ತಿತ್ವ ಮಾದರಿಯಾಗಿರುತ್ತದೆ. ಅದು ಆ ಕಲೆಯ ಶಕ್ತಿ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಯಕ್ಷಗಾನ ಕಲೆಗೆ ತನ್ನದೇ ಆದ ಇತಿಹಾಸ, ಮಹತ್ವ ಇದೆ. ಮುಕ್ಕೂರು ಪರಿಸರದಲ್ಲಿ ಯಕ್ಷಗಾನ ಪ್ರದರ್ಶನ, ಕಲಿಕೆ ನಡೆದಿದ್ದು ಈಗ ಮತ್ತೆ ಅಂತಹ ಪ್ರಯತ್ನ ಪ್ರಾರಂಭಿಸಿರುವುದು ಉತ್ತಮ ಸಂಗತಿ ಎಂದರು.
ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಕಾಪು, ಯಕ್ಷಗಾನದ ಹಿನ್ನೆಲೆ, ಇತಿಹಾಸವನ್ನು ಸ್ಮರಿಸುತ್ತಾ, ದೇಶ-ವಿದೇಶಗಳಲ್ಲಿ ತುಳುನಾಡಿನ ಕಂಪು ಪಸರಿಸುತ್ತಿರುವ ಕಲೆ ಇದಾಗಿದೆ. ಭಕ್ತಿ ಮಾರ್ಗ, ಪೌರಾಣಿಕ ಹಿನ್ನೆಲೆಗಳನ್ನು ಜನರಿಗೆ ತಿಳಿಸುವ ಮಾಧ್ಯಮವಾಗಿಯು ಯಕ್ಷಗಾನ ಕಲೆ ಗುರುತಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ಯಕ್ಷಗಾನ ತರಬೇತುದಾರರಾದ ಐತ್ತಪ್ಪ ಕಾನಾವು, ಬಾಲಚಂದ್ರ ಅಬೀರ, ಮುಕ್ಕೂರು-ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ಶಾಲಾ ಮುಖ್ಯಗುರು ವಸಂತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪುಣ್ಯ, ಪ್ರೇಕ್ಷಿತಾ ಪ್ರಾರ್ಥಿಸಿದರು. ಸಹಶಿಕ್ಷಕಿ ಸೌಮ್ಯ ವಂದಿಸಿದರು. ನೇಸರ ಯುವಕ ಮಂಡಲ ಕಾರ್ಯದರ್ಶಿ, ಶಿಕ್ಷಕ ಶಶಿಕುಮಾರ್ ನಿರೂಪಿಸಿದರು.