500 ರೂ. ಕೇಳಿದರೆ 2500 ರೂಪಾಯಿ ನೀಡುವ ಎಟಿಎಂ !!

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆಯಂತೆ. ಹೀಗಿರುವಾಗ ಸಹಜ ಮಾನವರು ಹಣಕ್ಕಾಗಿ ರಾಶಿ ಬೀಳೋದ್ರಲ್ಲಿ ತಪ್ಪೇನಿದೆ ಅಲ್ವಾ. ಸುಲಭವಾಗಿ ಹಣ ಬರುತ್ತದೆ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಇದೇ ರೀತಿಯ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಎಟಿಎಂ ಒಂದು 500 ರೂ. ಕೇಳಿದರೆ 2500 ನೀಡಿ ಗ್ರಾಹಕರನ್ನು ಫುಲ್ ಖುಷ್ ಮಾಡಿಸಿದೆ.

ಹೌದು. ನಾಗಪುರ ಜಿಲ್ಲೆಯಲ್ಲಿ ಬುಧವಾರ ಎಟಿಎಂನಿಂದ 500 ರೂಪಾಯಿ ಹಣ ವಿತ್‌ಡ್ರಾ ಮಾಡಲು ತೆರಳಿದ ವ್ಯಕ್ತಿಗೆ ಅಚ್ಚರಿ ಕಾದಿದ್ದು, ಒಂದು 500 ರೂಪಾಯಿ ನೋಟಿನ ಬದಲು ಐದು ಕರೆನ್ಸಿ ನೋಟುಗಳನ್ನು ಎಟಿಎಂ ನೀಡಿದೆ. ಏನೋ ಎಡವಟ್ಟು ಆಗಿರಬಹುದು ಎಂದು ಮತ್ತೆ ಅದನ್ನೇ ಅವರು ಪುನರಾವರ್ತಿಸಿದ್ದಾರೆ. 500 ರೂಪಾಯಿ ವಿತ್‌ಡ್ರಾ ಮಾಡಲು ಹೋದರೆ, ‘ ಎಂಜಾಯ್ ಮಾಡು’ ಎನ್ನುವಂತೆ ಮತ್ತೊಮ್ಮೆ 2,500 ರೂ ನಗದು ನೀಡಿದೆ.

ನಾಗಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿ ಇರುವ ಖಾಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಈ ಎಟಿಎಂ, ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ಹಣ ನೀಡಿದೆ. ಈ ರೀತಿ ಕೆಲವೇ ಸೆಕುಂಡುಗಳಲ್ಲಿ ನಿಮ್ಮ 500 ರೂಪಾಯಿ ಹಣ 5 ಪಟ್ಟು ರಿಟರ್ನ್ಸ್ ಕೊಡುತ್ತದೆ ಎಂದಾದಲ್ಲಿ ಅದು ಯಾರಿಗೆ ಬೇಡ? ಈ ರೀತಿ ಹಣ ಬರುತ್ತದೆ ಅಂದ್ರೆ ಸುದ್ದಿ ಹರಡದೆ ಇರುತ್ತಾ!?? ಈ ಸುದ್ದಿ ಕಾಳ್ಗಿಚ್ಚಿನಂತೆ ಪಟ್ಟಣದ ತುಂಬಾ ಹರಡಿದೆ. ಅಷ್ಟೇ ಅಲ್ಲದೆ, ಎಟಿಎಂನಿಂದ ಹಣ ಪಡೆದುಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.

ಹೀಗೆ ಅನೇಕರು ತಮ್ಮ ಎಟಿಎಂ ಕಾರ್ಡ್ ಹಾಕಿ ಹಣ ಪಡೆದುಕೊಂಡಿದ್ದಾರೆ. ಯಾರಿಗೆ ಎಷ್ಟು ಹಣ ಬಂತೋ ಗೊತ್ತಿಲ್ಲ. ಅದೆಲ್ಲವೂ ಅವರ ಖಾತೆಯಿಂದಲೇ ಬಂದ ದುಡ್ಡೋ, ಅಥವಾ ಎಟಿಎಂ ಕೊಟ್ಟ ಭಾಗ್ಯವೋ ತಿಳಿದಿಲ್ಲ. ಕೊನೆಗೆ ಬ್ಯಾಂಕ್ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಧಾವಿಸಿದ ಪೊಲೀಸರು ಎಟಿಎಂ ಬಾಗಿಲು ಮುಚ್ಚಿ, ಸರದಿ ಸಾಲಿನಲ್ಲಿ ಆಸೆಯಿಂದ ನಿಂತಿದ್ದ ಜನರನ್ನು ಮನೆಗೆ ಕಳುಹಿಸಿದ್ದಾರೆ. ನಂತರ ಪೊಲೀಸರು ಬ್ಯಾಂಕ್ ಕಚೇರಿಗೆ ವಿಷಯ ತಿಳಿಸಿದ್ದಾರೆ ಎಂದು ಖಾಪರ್ಖೇಡಾ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದಾಗಿ ಎಟಿಎಂ ಹೆಚ್ಚುವರಿ ನಗದು ಹಣವನ್ನು ನೀಡುತ್ತಿತ್ತು ಎಂದು ಅವರು ಹೇಳಿದ್ದಾರೆ. 100 ರೂ ಮುಖಬೆಲೆಯ ನೋಟುಗಳನ್ನು ಇರಿಸುವ ಯಂತ್ರದ ಒಳಗಿನ ಜಾಗದಲ್ಲಿ, ಹಣ ತುಂಬಿಸುವ ಸಿಬ್ಬಂದಿ ತಪ್ಪಾಗಿ 500 ರೂ ಮುಖಬೆಲೆಯ ನೋಟುಗಳನ್ನು ಇರಿಸಿದ್ದರು. ಅದರಿಂದಾಗಿ ಮೆಷಿನ್ನು ಬಾಚಿ ಬಾಚಿ ದುಡ್ಡು ಕೊಡುತ್ತಿತ್ತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.