ಇನ್ನು ಮುಂದೆ ಅಮೆರಿಕ ಪ್ರಯಾಣ ಬಲು ಸುಲಭ !!

Share the Article

ಅಮೆರಿಕ ತೆರಳುವ ಪ್ರಯಾಣಿಕರಿಗೆ ಸಮಾಧಾನಕರ ಸುದ್ದಿಯೊಂದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಯುಎಸ್‌ಗೆ ಪ್ರಯಾಣಿಸಬೇಕಾದರೆ, ಒಂದು ದಿನದ ಮುಂಚೆ ಕೊರೋನಾ ಟೆಸ್ಟ್‌ ಮಾಡಿಸಬೇಕು ಎಂಬ ನಿಯಮವನ್ನು ಬೈಡನ್‌ ಸರ್ಕಾರ ತೆಗೆದುಹಾಕಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿದ್ದ ಕೊನೆಯ ನಿಯಮವನ್ನು ಸಹ ತೆರವುಗೊಳಿಸಲಾಗಿದೆ.

ಈ ಬಗ್ಗೆ ಯುಎಸ್‌ ಅಧಿಕಾರಿ ಮಾಹಿತಿ ನೀಡಿದ್ದು, ಯುಎಸ್‌ ಪ್ರವಾಸ ಕೈಗೊಳ್ಳಲು ಇನ್ನು ಮುಂದೆ ಕೋವಿಡ್‌ ಟೆಸ್ಟ್‌ ಮಾಡಬೇಕಾದ ಅಗತ್ಯವಿಲ್ಲ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಪ್ರತಿ 90 ದಿನಗಳಿಗೊಮ್ಮೆ ಪರೀಕ್ಷಾ ಅಗತ್ಯತೆಯನ್ನು ಮರುಮೌಲ್ಯಮಾಪನ ಮಾಡುತ್ತದೆ. ಎಲ್ಲಿಯಾದರೂ ಸಮಸ್ಯೆಗಳು ಕಂಡುಬಂದರೆ ಅಥವಾ ಹೊಸ ರೂಪಾಂತರವು ಹೊರಹೊಮ್ಮಿದರೆ ಮತ್ತೆ ನಿಯಮಗಳನ್ನು ಜಾರಿಗೊಳಿಸುತ್ತೇವೆ. ಅಲ್ಲಿಯವರೆಗೆ ಕೊರೋನಾ ಟೆಸ್ಟ್‌ ಕಡ್ಡಾಯ ಸೂಚನೆ ತೆರವುಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಯುರೋಪ್, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ ಮತ್ತು ಇರಾನ್‌ನಿಂದ ಅನೇಕ ಪ್ರಯಾಣಿಕರು ಯುಎಸ್‌ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೊರೋನಾ ಉಲ್ಬಣಗೊಳ್ಳಬಹುದು ಎಂಬ ಭೀತಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಈ ಹಿಂದೆ, ಸಂಪೂರ್ಣ ಲಸಿಕೆ ಪಡೆದವರು ಯುಎಸ್‌ಗೆ ಪ್ರಯಾಣಿಸಬಹುದು. ಆದರೆ ಈ ಸಂದರ್ಭದಲ್ಲಿ ಪ್ರಯಾಣಕ್ಕೆ ಮೂರು ದಿನ ಮುನ್ನ ಕೋವಿಡ್‌ ನೆಗೆಟಿವ್‌ ಟೆಸ್ಟ್‌ ಪ್ರತಿಯನ್ನು ಹೊಂದಿರಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಲಸಿಕೆ ಹಾಕದ ಜನರು ಪ್ರಯಾಣಕ್ಕೆ ಒಂದು ದಿನ ಮುಂಚಿತವಾಗಿ ಕೊರೋನಾ ಟೆಸ್ಟ್‌ಗೆ ಒಳಪಡಬೇಕು ಎಂದು ಹೇಳಲಾಗಿತ್ತು.

ಓಮಿಕ್ರಾನ್ ರೂಪಾಂತರಿಯು ನವೆಂಬರ್‌ ತಿಂಗಳಿನಲ್ಲಿ ಹೆಚ್ಚಾಗಿ ವ್ಯಾಪಿಸಿ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸಿತ್ತು. ಈ ಸಂದರ್ಭಲ್ಲಿ ಬೈಡೆನ್ ಸರ್ಕಾರವು ಅಗತ್ಯ ಕ್ರಮಗಳನ್ನು ಜಾರಿಗೊಳಿಸಿತ್ತು. ಇನ್ನು ಕಳೆದ ಕೆಲ ತಿಂಗಳುಗಳಿಂದ ಕೊರೋನಾ ಮಾರ್ಗಸೂಚಿಗಳನ್ನು ತೆಗೆದುಹಾಕುವಂತೆ ವಿಮಾನಯಾನ ಮತ್ತು ಪ್ರವಾಸೋದ್ಯಮ ಇಲಾಖೆಗಳು ಒತ್ತಾಯಿಸುತ್ತಿದ್ದವು. ಸದ್ಯ ಈ ಆದೇಶ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಲು ಯೋಜಿಸುತ್ತಿದ್ದವರಿಗೆ ಸಂತಸ ನೀಡಿದೆ. ಯುಎಸ್‌ ಆಡಳಿತವೂ ಸಹ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿಯಮಗಳನ್ನು ತೆಗೆದುಹಾಕಿದೆ.

Leave A Reply