ಇನ್ನು ಮುಂದೆ ಮೊಬೈಲ್, ಲ್ಯಾಪ್ ಟಾಪ್, ಕ್ಯಾಮೆರಾ ಎಲ್ಲದಕ್ಕೂ ಒಂದೇ ಚಾರ್ಜರ್ !!

Share the Article

ಇಷ್ಟು ದಿನ ನಾವು ಬಳಸುತ್ತಿದ್ದ ಮೊಬೈಲ್, ಲ್ಯಾಪ್ ಟಾಪ್ ಹೀಗೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇರೆ ಬೇರೆ ರೀತಿಯ ಚಾರ್ಜರ್ ಗಳು ಇರುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ ಗ್ಯಾಜೆಟ್‌ಗಳಲ್ಲೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಬೇರೆ ಬೇರೆ ರೀತಿಯ ಚಾರ್ಜಿಂಗ್ ಕೇಬಲ್‌ಗಳ ರಾಶಿ ಇಟ್ಟುಕೊಳ್ಳುವ ಅಗತ್ಯ ಬೀಳುವುದಿಲ್ಲ.

ಹೌದು. ಎಲ್ಲಾ ರೀತಿಯ ಗ್ಯಾಜೆಟ್‌ಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಅನ್ನು ಕಡ್ಡಾಯಗೊಳಿಸಲು ಯುರೋಪಿಯನ್ ಯೂನಿಯನ್(ಇಯು) ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ಪರಿಣಾಮವಾಗಿ ಇನ್ನು ಮುಂದೆ ತಯಾರಾಗಲಿರುವ ಎಲ್ಲಾ ರೀತಿಯ ಗ್ಯಾಜೆಟ್‌ಗಳಲ್ಲೂ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇರಲಿದೆ.

ಇಲ್ಲಿಯವರೆಗೆ ಬಿಡುಗಡೆಯಾಗಿರುವ ಗ್ಯಾಜೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದರೆ 2024ರ ಒಳಗಾಗಿ ಬಹುತೇಕ ಎಲ್ಲಾ ರೀತಿಯ ಸಾಧನಗಳಲ್ಲೂ ಟೈಪ್ ಸಿ ಪೋರ್ಟ್ ನೋಡಲು ಸಿಗಲಿದೆ. ಮುಖ್ಯವಾಗಿ ತನ್ನದೇ ಪ್ರತ್ಯೇಕ ಚಾರ್ಜಿಂಗ್ ಪೋರ್ಟ್ ರಚಿಸುವ ಆಪಲ್‌ಗೂ ಈ ನೀತಿ ಅನ್ವಯಿಸುವುದು ವಿಶೇಷ.

ಒಂದೊಂದು ಸಾಧನಗಳಿಗೆ ಒಂದೊಂದು ಚಾರ್ಜಿಂಗ್ ಕೇಬಲ್‌ಗಳು ಇರುವುದರಿಂದ ಹಾಳಾದ ಬಳಿಕ ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್ ತ್ಯಾಜವಾಗಿ(ಇ-ತ್ಯಾಜ್ಯ) ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಎಲ್ಲಾ ಸಾಧನಗಳಿಗೂ ಒಂದೇ ರೀತಿಯ ಕೇಬಲ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಲ್ಲಿ, ಇ-ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಹೀಗಾಗಿ ಇಯು ಇದೀಗ ಪರಿಸರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ.

ಈ ಹೊಸ ನಿಯಮ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಐಫೋನ್ ಹೊರತುಪಡಿಸಿ ಬಹುತೇಕ ದೈತ್ಯ ಸ್ಮಾರ್ಟ್ ಫೋನ್ ಕಂಪನಿಗಳು ಟೈಪ್ ಸಿ ಪೋರ್ಟ್ ಹೊಂದಿರುವ ಮೊಬೈಲ್‌ಗಳನ್ನೇ ತಯಾರಿಕೆ ಮಾಡುತ್ತವೆ. ಆದರೂ ಆಪಲ್ ಕಂಪನಿ ಈಗಾಗಲೇ ತನ್ನ ಕೆಲವು ಐಪ್ಯಾಡ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಟೈಪ್ ಸಿ ಪೋರ್ಟ್‌ಗಳನ್ನೇ ತಯಾರಿಸುತ್ತಿವೆ.

Leave A Reply