ಪೋಷಕಾಂಶಗಳ ಗಣಿ ದಾಳಿಂಬೆ ಹಣ್ಣಿನ ಉಪಯೋಗದ ಕುರಿತು ಮಾಹಿತಿ
ದಾಳಿಂಬೆ ಹಣ್ಣು ಕೇವಲ ರುಚಿಯಲ್ಲಿ ಮೇಲುಗೈ ಮಾತ್ರವಲ್ಲದೇ ಪೋಷಕಾಂಶಗಳ ಗಣಿಯನ್ನೇ ಹೊಂದಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದ್ದು, ಇದರಿಂದ ಹಲವಾರು ರೀತಿಯ ರೋಗಗಳಿಂದ ದೂರವಿರಬಹುದು.
ದಾಳಿಂಬೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿದ್ದು, ಇದು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ತಿನ್ನಲು ಮಾತ್ರವಲ್ಲ, ಅದರ ರಸವನ್ನು ಹೊರತೆಗೆಯುವುದರ ಮೂಲಕವೂ ಸೇವಿಸಬಹುದು. ದಾಳಿಂಬೆ ರಕ್ತದ ಕೊರತೆಯನ್ನು ನಿವಾರಿಸುವುದಲ್ಲದೆ, ಮನಸ್ಸನ್ನು ಚುರುಕುಗೊಳಿಸಲು, ಚರ್ಮಕ್ಕೂ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಗರ್ಭಿಣಿ ಮಹಿಳೆಗೆ ಪ್ರಯೋಜನಕಾರಿ:
ದಾಳಿಂಬೆ ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ತುಂಬಾ ಪ್ರಯೋಜನವಿದೆ. ದಾಳಿಂಬೆ ಹೂ ರಕ್ತದ ಕೊರತೆಯನ್ನು ನೀಗಿಸುತ್ತದೆ. ಜೊತೆಗೆ ದೇಹದಲ್ಲಿನ ನೀರಿನ ಪ್ರಮಾಣವನ್ನು ಸಹ ಇದು ಹೆಚ್ಚಿಸುತ್ತದೆ. ದಾಳಿಂಬೆ ಯಲ್ಲಿರುವ ಖನಿಜಗಳು, ಜೀವಸತ್ವಗಳು ಹಾಗೂ ಫ್ಲೋರಿಕ್ ಆಸಿಡ್ ಗರ್ಭಿಣಿಯರ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಮೂಳೆಗಳನ್ನು ಬಲ ಪಡಿಸಿಕೊಳ್ಳಬಹುದು:
ದಾಳಿಂಬೆ ಬೀಜಗಳನ್ನು ಸೇವಿಸುವುದರಿಂದ ಮೂಳೆಗಳನ್ನು ಬಲ ಪಡಿಸಿಕೊಳ್ಳಬಹುದು. ಇದರಲ್ಲಿ ಅಡಕವಾಗಿರುವ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ ಇದಕ್ಕೆ ಮುಖ್ಯ ಕಾರಣವಾಗಿದೆ. ಇದು ಮೂಳೆಗಳನ್ನು ಬಲಪಡಿಸುವ ಕಾರ್ಯವನ್ನು ಮಾಡುತ್ತದೆ. ಆದ್ದರಿಂದ ಮೂಳೆಗಳ ಬಲ ಹೆಚ್ಚಿಸಲು ದಾಳಿಂಬೆಗಳನ್ನು ಸೇವಿಸುವುದು ಉತ್ತಮ.
ಹೃದ್ರೋಗದಲ್ಲಿ ಪ್ರಯೋಜನಕಾರಿ:
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಾಳಿಂಬೆಯು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಅಧಿಕವಾಗಿದೆ. ಆದ್ದರಿಂದ ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ಅದೇ ರೀತಿ ಹೃದ್ರೋಗ ಸಮಸ್ಯೆ ಇರುವವರು ದಾಳಿಂಬೆಯನ್ನು ಯಥೇಚ್ಛವಾಗಿ ತಿನ್ನಿ ಎಂದು ವೈದ್ಯರು ಸಹ ಸೇವಿಸಲು ಶಿಫಾರಸು ಮಾಡುತ್ತಾರೆ.
ಮೊಡವೆ ವಿರುದ್ಧ ಹೋರಾಡುವ ಗುಣ ಹೊಂದಿದೆ:
ಮೊಡವೆಯ ಸಮಸ್ಯೆ ಯಾರಿಗಿಲ್ಲ ಹೇಳಿ. ಜೀವನದಲ್ಲಿ ಒಂದಲ್ಲ ಒಂದು ಬಾರಿಯಾದರೂ ಎಲ್ಲರೂ ಮೊಡವೆ ಸಮಸ್ಯೆಯಿಂದ ಹೈರಾಣಾಗಿರುತ್ತಾರೆ. ಆದರೆ ದಾಳಿಂಬೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಮೊಡವೆಗಳಿಗೆ ಕಾರಣವಾಗುವಂತಹ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ತ್ವಚೆಗೆ ಉತ್ತಮವಾದ ಹೊಳಪನ್ನು ನೀಡುವುದು.
ಅಲರ್ಜಿಗೆ ನೈಸರ್ಗಿಕ ಪ್ರತಿರೋಧಿಯಾಗಿ ಕೆಲಸ ಮಾಡುತ್ತದೆ:
ಸಾಮಾನ್ಯವಾಗಿ ಅಲರ್ಜಿ ಕಾಟವು ಎಲ್ಲರಿಗೂ ಇರುತ್ತದೆ. ಹೂವಿನ ಪರಾಗ, ಕೀಟಗಳ ಕಚ್ಚುವಿಕೆ, ಕೆಲವು ಗಿಡಗ ಮುಳ್ಳುಗಳು, ಎಲೆ ತುಂಡಾದರೆ ಒಸರುವ ಹಾಲಿನಂತಹ ದ್ರವ ಮೊದಲಾದವು ಅಲರ್ಜಿ ಉಂಟುಮಾಡುತ್ತವೆ. ಈ ಅಲರ್ಜಿಗಳನ್ನು ಎದುರಿಸಲು ದೇಹ ಅದಕ್ಕೆ ಕಾರಣವಾದ ಅಲರ್ಜಿಕಾರಕ ವಸ್ತುವಿಗೆ ಪ್ರತಿರೋಧಿಯನ್ನು ಸೃಷ್ಟಿಸಿಕೊಳ್ಳಬೇಕು. ದಾಳಿಂಬೆಯಲ್ಲಿರುವ ಪೊಲಿಫಿನೊಲ್ ಎಂಬ ಕಿಣ್ವ ಈ ಪ್ರತಿರೋಧಿಯನ್ನು ಸೃಷ್ಟಿಸಲು ನೆರವಾಗುತ್ತದೆ. ಪರಿಣಾಮವಾಗಿ ದೇಹ ಅಲರ್ಜಿಯಿಂದ ಶೀಘ್ರ ಹೊರಬರುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು:
ದಾಳಿಂಬೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮಳೆಗಾಲದಲ್ಲಿ ಗಾಳಿ, ನೀರಿನ ಮೂಲಕ ದೇಹಕ್ಕೆ ದಾಳಿಯಿಡುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ.