ಖಾಸಗಿ ಲೋನ್ ಆಪ್ ಬಳಕೆದಾರರೇ ಎಚ್ಚರ !! | ಹಣದ ಆಸೆಗೆ ಹೋದೀತು ಮಾನ
ತಂತ್ರಜ್ಞಾನ ಬೆಳೆದಂತೆ ಅದನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲೋನ್ ಆಪ್ ಹೆಸರಲ್ಲಿ ಮಾನ ಹಾನಿ ಮಾಡಿ ಹಣ ಪೀಕುವ ಕೆಲಸವನ್ನು ಇದೀಗ ಸೈಬರ್ ಖದೀಮರು ಆರಂಭಿಸಿದ್ದಾರೆ. ಹೀಗಾಗಿ ನೀವೇನಾದರೂ ಖಾಸಗಿ ಲೋನ್ ಆಪ್‌ಗಳನ್ನು ಬಳಸುತ್ತಿದ್ದರೆ ಕೊಂಚ ಜಾಗರೂಕರಾಗಿರಿ.
ವಾಟ್ಸಾಪ್ ನಲ್ಲಿ ಬರೋ ಲಿಂಕ್ ಕ್ಲಿಕ್ ಮಾಡಿ ನೀವೇನಾದರೂ ಅವರು ಹೇಳಿದಂತೆ ಡಿಟೇಲ್ಸ್ ಅಪ್ ಲೋಡ್ ಮಾಡಿದ್ರೆ ಅಲ್ಲಿಗೆ ನಿಮ್ಮ ಕತೆ ಮುಗಿದಂತೆ. ಅವರು ಕೇಳುವ ಎಲ್ಲ ಡಿಟೇಲ್ಸ್ ಅಪ್ ಲೋಡ್ ಮಾಡಿದರೆ, ನೀವು ಲೋನ್ ಕೇಳಿಲ್ಲ ಅಂದ್ರು ನಿಮ್ಮ ಅಕೌಂಟ್ ಗೆ ಹಣ ಬೀಳುತ್ತೆ. ಅಲ್ಲಿಂದ ಶುರುವಾಗುತ್ತೆ ನೋಡಿ ಲೋನ್ ಕೊಟ್ಟ ಹಣದ ವಸೂಲಿ. ಅಷ್ಟಕ್ಕೂ ಲೋನ್ ರಿಕವರಿ ಮಾಡಲು ಅವರು ಹಿಡಿಯುವ ಮಾರ್ಗ ಕೇಳಿದ್ರೆ ಶಾಕ್ ಆಗ್ತೀರಾ.
ಹೌದು. ಮೊದಲಿಗೆ ವಾಟ್ಸಾಪ್ ನಲ್ಲಿ ಲೋನ್ ಆಪ್ ಲಿಂಕ್ ಕಳುಹಿಸುವ ಖದೀಮರು, ಮೊದಲಿಗೆ ಹಣ ಕಟ್ಟುವಂತೆ ಅಪರಿಚಿತ ನಂಬರ್ ನಿಂದ ಕರೆ ಮಾಡುತ್ತಾರೆ. ಹಣ ಕಟ್ಟುವಂತೆ ಹೇಳುತ್ತಾರೆ. ಹಣ ಕಟ್ಟಿದ ಮೇಲೂ ಮತ್ತೆ ಮತ್ತೆ ಹಣ ಕಟ್ಟುವಂತೆ ಕರೆ ಮಾಡಿ ಟಾರ್ಚರ್ ನೀಡುತ್ತಾರೆ. ಆಗ ವ್ಯಕ್ತಿ ಅವರ ಫೋನ್‌ಗಳನ್ನೇನಾದರೂ ಅವಾಯ್ಡ್ ಮಾಡಿದರೆ, ಅವರು ಜಿ-ಮೇಲ್ ಹ್ಯಾಕ್ ಮಾಡುತ್ತಾರೆ.
ಬಳಿಕ ಕಾಂಟ್ಯಾಕ್ಟ್ ನಂಬರ್‌ಗಳನ್ನು ಕುದಿಯುವ ಖದೀಮರು, ಆ ನಂಬರ್ ಗಳಿಗೆ ಮೊದಲಿಗೆ ಅಸಭ್ಯವಾಗಿ ಆಡಿಯೋ ಮೆಸೇಜ್ ಮಾಡುತ್ತಾರೆ. ಅಷ್ಟೇ ಅಲ್ಲದೆ ಆ ವ್ಯಕ್ತಿಯ ಅಶ್ಲೀಲವಾದ ಫೋಟೋ ಕಳಿಸಿ, ಹಣ ಕಟ್ಟುವಂತೆ ಡಿಮ್ಯಾಂಡ್ ಮಾಡುತ್ತಾರೆ.
ಇಂತಹ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಈ ರೀತಿ ನಕಲಿ ಲೋನ್ ಆಪ್ ಗಳ ಹಾವಳಿಗೆ ಸಿಕ್ಕು ಅನೇಕ ಜನ ಮಾನ ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ರೀತಿಯ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ಈ ರೀತಿಯ ವಿಷಯಗಳಲ್ಲಿ ಅತ್ಯಂತ ಜಾಗರೂಕರಾಗಿರಬೇಕಾಗಿ ಗ್ರಾಹಕರಲ್ಲಿ ವಿನಂತಿ.