ಸಗಣಿ ಮಾರಿ ಗಂಡನ ಬಹುದೊಡ್ಡ ಆಸೆ ತೀರಿಸಿದ ಪತ್ನಿ !! | ಮಹಿಳೆಯ ಕಾರ್ಯ ವೈಖರಿಗೆ ಸ್ವತಃ ಮುಖ್ಯಮಂತ್ರಿಗಳಿಂದಲೇ ಅಭಿನಂದನೆ
ಗಂಡಂದಿರು ಹೆಂಡತಿಯ ಆಸೆ ತೀರಿಸಲು ಏನು ಬೇಕಾದರೂ ಮಾಡುತ್ತಾರೆ. ಹಲವಾರು ಬಾರಿ ವಿವಿಧ ರೀತಿಯ ಸರ್ಪ್ರೈಸ್ ನೀಡಿ ಪತ್ನಿಯನ್ನು ಖುಷಿಗೊಳಿಸುತ್ತಾರೆ. ಆದರೆ ಇಲ್ಲೊಬ್ಬಳು ಪತ್ನಿ ತನ್ನ ಗಂಡನಿಗೆ ಆತನ ಇಷ್ಟದ ಬೈಕ್ ಕೊಡಿಸಲು ಬಹಳ ಅದ್ಭುತ ಕೆಲಸವನ್ನೇ ಮಾಡಿದ್ದಾಳೆ.
ಛತ್ತೀಸ್‌ಗಢದ ಬಸ್ತಾರ್‌ನ ಬಕ್ವಾಂಡ್ ಪ್ರದೇಶದಿಂದ ಮಹಿಳೆಯೊಬ್ಬರು ಹಸುವಿನ ಸಗಣಿ ಮಾರಾಟದಿಂದ ಬಂದ ಹಣದಿಂದ ತನ್ನ ಪತಿಗೆ ಬೈಕ್ ಉಡುಗೊರೆಯಾಗಿ ನೀಡಿದ್ದಾಳೆ. ರಾಜ್ಯದಲ್ಲಿ ಗೋಧನ್ ನ್ಯಾಯ ಯೋಜನೆಯಡಿ ಹಸುವಿನ ಮಾಲೀಕರಿಂದ ಕೆ.ಜಿ.ಗೆ 2 ರೂ. ನಂತೆ ಸಗಣಿಯನ್ನು ಖರೀದಿಸಲಾಗುತ್ತದೆ. ಈ ಮೂಲಕ ಹಸುವಿನ ಸಗಣಿಯನ್ನು ಮಾರಿ ಬರುವ ಆದಾಯವು ಆರ್ಥಿಕವಾಗಿ ದೊಡ್ಡ ಬದಲಾವಣೆಯನ್ನು ತರುವಲ್ಲಿ ಸಾಧ್ಯವಾಗಿಸುವುದು ಇದರ ಉದ್ದೇಶವಾಗಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇದೀಗ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಈ ವಿಷಯಗಳೆಲ್ಲ ಮುಖ್ಯಮಂತ್ರಿಯವರಲ್ಲಿ ಗ್ರಾಮಸ್ಥರು ಹೇಳಿದ್ದಾರೆ.
ಹಸುವಿನ ಸಗಣಿ ಮಾರಾಟ ಮಾಡಿ ಪತಿಗೆ ಬೈಕ್ ಖರೀದಿ :
ಹಸುವಿನ ಸಗಣಿ ಮಾರಾಟ ಮಾಡಿ ಪತಿಗೆ 80 ಸಾವಿರ ರೂಪಾಯಿ ಮೌಲ್ಯದ ಬೈಕ್ ಖರೀದಿಸಿರುವುದಾಗಿ ಮಂಗನಾರ್‌ನಿಂದ ಬಂದಿದ್ದ ನೀಲಿಮಾ ದೇವಾಂಗನ್ ತಿಳಿಸಿದ್ದಾರೆ. ತಾವು ಕಂಡಿರುವ ಕನಸುಗಳನ್ನು ನನಸಾಗಿಸಲು ಈ ಯೋಜನೆ ಹೇಗೆ ಸಹಾಯ ಮಾಡುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ. ಗೋಥಾನ್ ಮೂಲಕ ಅವರ ಗುಂಪು ಆರ್ಥಿಕವಾಗಿಯೂ ತುಂಬಾ ಪ್ರಬಲವಾಗಿದೆ ಎಂದಿದ್ದಾರೆ. ವರ್ಮಿ ಕಾಂಪೋಸ್ಟ್ ಮಾರಾಟ ಮಾಡಿ ಹತ್ತು ಲಕ್ಷ ರೂಪಾಯಿ ಪಡೆದಿರುವುದಾಗಿಯೂ ತಿಳಿಸಿದ್ದಾರೆ. 13 ಲಕ್ಷ ಮೌಲ್ಯದ ಎರೆಹುಳುಗಳು ಇಲ್ಲಿವರೆಗೆ ಮಾರಾಟವಾಗಿವೆ. ಸಮುದಾಯ ಉದ್ಯಾನಗಳನ್ನೂ ನಡೆಸುತ್ತಿದ್ದು, ಈ ಮೂಲಕ ಎರಡು ಲಕ್ಷ ರೂಪಾಯಿ ಗಳಿಸಿದ್ದೇವೆ ಎಂದು ನೀಲಿಮಾ ದೇವಾಂಗನ್ ವಿವರಿಸಿದ್ದಾರೆ.
ಹಸುವಿನ ಸಗಣಿ ಮಾರಿದ ನಂತರ ಜೋಳದ ಯಂತ್ರ ಖರೀದಿ :
ನರ್ಸರಿ ಮೂಲಕ 60 ಸಾವಿರ ರೂಪಾಯಿ ಗಳಿಸಿದ್ದು, ಮೀನು ಸಾಕಾಣಿಕೆ ಮೂಲಕ 60 ಸಾವಿರ, ಕೋಳಿ ಸಾಕಾಣಿಕೆ ಮೂಲಕ 75 ಸಾವಿರ ಆದಾಯ ಗಳಿಸಿದ್ದೇವೆ ಎಂದಿದ್ದಾರೆ. ಅದೇ ರೀತಿ ಮೂರು ಲಕ್ಷ ರೂಪಾಯಿ ಮೌಲ್ಯದ ಸಗಣಿ ಮಾರಾಟ ಮಾಡಿ ಈ ಹಣದಲ್ಲಿ ಜೋಳದ ಯಂತ್ರ ಖರೀದಿಸಿರುವುದಾಗಿ ಆಕೆಯ ಪತಿ ಮುಖ್ಯಮಂತ್ರಿಗೆ ತಿಳಿಸಿದರು. ನೀಲಿಮಾ ಅವರನ್ನು ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಎಲ್ಲಾ ಗ್ರಾಮಗಳಲ್ಲೂ ಇದೇ ರೀತಿಯ ಕೆಲಸ ಆಗಬೇಕು ಎಂದಿದ್ದಾರೆ.