‘ಆಸೆ ಆದ್ರೆ ಗೋಮಾಂಸ ತಿಂತೇನೆ’ ಎಂದ ಶುದ್ಧ ಹಿಂದೂ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ

ತುಮಕೂರು: ‘ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ಆಸೆ ಆದ್ರೆ ತಿನ್ನುತ್ತೇನೆ’ ನನ್ನನ್ನು ತಡೆಯಲು ನೀವು ಯಾರು ಎಂದು ಈ ಹಿಂದೆ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದೇನೆ ಎಂದು ಶುದ್ಧ ಹಿಂದೂ ಎಂದು ಹೇಳಿಕೊಳ್ಳುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

 

ತುಮಕೂರಿನಲ್ಲಿ ಮಾತನಾಡಿದ ಅವರು, 1964ರಿಂದಲೇ ನಮ್ಮ ದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಇದೆ. ಅದನ್ನು ತಿದ್ದುಪಡಿ ಮಾಡಿ ಕಾನೂನಾಗಿ ಮಾಡಿದರು. ನಾನು ಮುಖ್ಯಮಂತ್ರಿ ಆದ ಬಳಿಕ ಮತ್ತೆ ಅದನ್ನು ಹಿಂದಿನಂತೆಯೇ ಮಾಡಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಮತ್ತೆ ಹಳೆ ಕಾನೂನು ಜಾರಿಗೆ ತಂದರು ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಅದೇ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಮಾತನಾಡುತ್ತಾ, ಆಹಾರ ಪದ್ಧತಿ ಬಗ್ಗೆ ಕಾನೂನು ಜಾರಿಗೆ ತರುವುದು ಸರಿಯಲ್ಲ. ಆಹಾರ ಅವರವರ ವೈಯಕ್ತಿಕ ವಿಚಾರ. ಇಚ್ಛಿಸಿದ ಆಹಾರ ಸೇವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕೇವಲ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಇಂತಹ ಕಾನೂನು ಜಾರಿಗೆ ತರಬೇಡಿ. ಗೋಮಾಂಸವನ್ನು ಕೇವಲ ಮುಸ್ಲಿಮರಷ್ಟೇ ತಿನ್ನುತ್ತಿಲ್ಲ. ಕ್ರಿಶ್ಚಿಯನ್ನರೂ ತಿನ್ನುತ್ತಾರೆ, ಹಿಂದೂ ಧರ್ಮದವರು ಕೂಡಾ ತಿನ್ನುತ್ತಾರೆ. ನಾನು ಇದುವರೆಗೂ ಗೋಮಾಂಸ ತಿಂದಿಲ್ಲ. ಆದರೆ, ನನಗೇನಾದರೂ ತಿನ್ನಬೇಕು ಎಂದು ಅನಿಸಿದರೆ, ಖಂಡಿತಾ ತಿನ್ನುತ್ತೇನೆ. ನನ್ನನ್ನು ತಡೆಯಲು ನೀವು ಯಾರು ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದೇನೆ. ಆಹಾರ ಪದ್ಧತಿ ಅವರವರ ಇಚ್ಛೆ. ನನ್ನ ಆಹಾರ ಕ್ರಮ ನನ್ನ ಹಕ್ಕು. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

‘ಅಲ್ಪ‌ ಸಂಖ್ಯಾತರ ಹಕ್ಕುಗಳು, ಅವರ ಪರವಾಗಿ ಮಾತನಾಡಿದರೆ, ಸಂಘ ಪರಿವಾರದವರು ನೀನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದಿಯಾ ಎಂದು ಕೇಳುತ್ತಾರೆ. ನಮ್ಮ ಧರ್ಮದಲ್ಲಿ ನಿಷ್ಠೆಯ ಜತೆಗೆ ಇತರೆ ಧರ್ಮಗಳನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ದ್ವೇಷ, ಅಸೂಯೆ ಇದ್ದರೆ ನಾವು ಮನುಷ್ಯರಾಗಲು ಅರ್ಹರಲ್ಲ. ನಾವೆಲ್ಲ ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು‘ ಎಂದರು.

‘ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕೆ’ ಎಂದು ಪ್ರಶ್ನಿಸಿದರು. ಅಲ್ಲದೆ, ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ. ನಾವ್ಯಾರೂ ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ. ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು. ಸಂಘ ಪರಿವಾರದವರು ಧರ್ಮ, ಮನುಷ್ಯರ ನಡುವೆ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನು ಜಾತಿ, ಧರ್ಮದ ಹೆಸರಲ್ಲಿ ಒಡೆಯುತ್ತಿದ್ದಾರೆ. ಅಂತಹವರ ಕೈಗೆ ಅಧಿಕಾರ ಕೊಟ್ಟರೆ ಸಮಾಜದಲ್ಲಿ ಮತ್ತಷ್ಟು ಒಡಕು ಮೂಡಲಿದೆ‌.

ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ನಡೆ ಸರಿಯಲ್ಲ ಎಂದು ಗುಡುಗಿದರು. ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಕೇವಲ ಮುಸಲ್ಮಾನರನ್ನು ಗಮನದಲ್ಲಿಟ್ಟುಕೊಂಡು ಅದನ್ನು ತಿದ್ದುಪಡಿ ಮಾಡಲು ಹೋಗಬೇಡಿ ಎಂದು ನಾನು ವಿಧಾನಸಭೆಯಲ್ಲಿ ಆಗ್ರಹಿಸಿದ್ದೇನೆ ಎಂದು ತಿಳಿಸಿದರು.

Leave A Reply

Your email address will not be published.