ಕೊರೋನಾ ವೈರಸ್ ಅಬ್ಬರದ ನಡುವೆ ಮಂಕಿಪಾಕ್ಸ್ ಭೀತಿ !! | ಏನಿದು ಮಂಕಿಪಾಕ್ಸ್?? ರೋಗಲಕ್ಷಣಗಳೇನು??

ವಿಶ್ವದಲ್ಲಿ ಕೊರೋನಾ ವೈರಸ್ ಇನ್ನೂ ಕೂಡ ಅಬ್ಬರಿಸುವುದನ್ನು ನಿಲ್ಲಿಸಿಲ್ಲ.‌ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದ್ದರೂ ಪ್ರತಿದಿನ ಪ್ರಕರಣಗಳು ಅಲ್ಪ ಸಂಖ್ಯೆಯಲ್ಲಿ ಇದ್ದೇ ಇರುತ್ತದೆ. ಇದರ ನಡುವೆ ಇನ್ನೊಂದು ಕಾಯಿಲೆ ಮತ್ತೆ ಜಗತ್ತನ್ನು ಭಯಭೀತರನ್ನಾಗಿಸಿದೆ. ಹೌದು. ಯುನೈಟೆಡ್ ಸ್ಟೇಟ್ಸ್‌ನ ಮ್ಯಾಸಚೂಸೆಟ್ಸ್ ನಲ್ಲಿ ಮಂಕಿಪಾಕ್ಸ್ ನ ಅಪರೂಪದ ಪ್ರಕರಣ ವರದಿಯಾಗಿದ್ದು, ಇದು ಈ ವರ್ಷ ದೇಶದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ.

 

ಮಂಕಿಪಾಕ್ಸ್ ವೈರಸ್ ಸೋಂಕಿತ ವ್ಯಕ್ತಿ ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರು. ಸ್ಪೇನ್ ಮತ್ತು ಪೋರ್ಚುಗಲ್ 40ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಹೊಸದಾಗಿ ಕೆನಡಾ ದೇಶದಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಮಂಕಿಪಾಕ್ಸ್ ನ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೆಚ್ಚಿನ ಮಂಕಿಪಾಕ್ಸ್ ಪ್ರಕರಣಗಳ ಉಂಟಾಗುವ ಸಾಧ್ಯತೆ ಇದೆ ಎಂದು ಊಹಿಸಿದೆ.

ಮಂಕಿಪಾಕ್ಸ್ ನಿಂದ ನಾಗರೀಕರಿಗೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಈಗಾಗಲೇ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆಹಚ್ಚಲಾಗುತ್ತಿದೆ.

ಮಂಕಿಪಾಕ್ಸ್ ಎಂದರೇನು?

ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು. ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.

ರೋಗಲಕ್ಷಣಗಳು ಯಾವುವು??

ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್​ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಜನರು ತಪ್ಪು ಮಾಡುತ್ತಾರೆ.

ಇದುವರೆಗೂ ಮಂಕಿಪಾಕ್ಸ್ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಉಸಿರಾಟದ ಪ್ರದೇಶ, ಗಾಯಗಳು, ಮೂಗು, ಬಾಯಿ ಅಥವಾ ಕಣ್ಣುಗಳ ಮೂಲಕ ಪ್ರವೇಶಿಸಬಹುದು ಎಂದು ತಜ್ಞರು ಭಾವಿಸಿದ್ದರು. ಆದರೆ ಹೊಸ ಪ್ರಕರಣಗಳನ್ನು ಪರೀಕ್ಷಿಸಿದ ನಂತರ, ಮಂಕಿ ವೈರಸ್ ಲೈಂಗಿಕ ಸಂಭೋಗದ ಮೂಲಕವೂ ಹರಡಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ನೀವು ಮಂಕಿ ಪಾಕ್ಸ್ ಹೊಂದಿರುವ ಯಾರೊಂದಿಗಾದರೂ ಲೈಂಗಿಕ ಕ್ರಿಯೆ ನಡೆಸಿದರೆ, ಅವರ ಸಂಗಾತಿಗೂ ಮಂಕಿ ಪಾಕ್ಸ್ ಬರುವ ಸಾಧ್ಯತೆಯಿದೆ ಎಂದು ತಜ್ಞರ ವಿಭಾಗವೊಂದು ತಿಳಿಸಿದೆ.

Leave A Reply

Your email address will not be published.