ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ 224 ಕ್ಷೇತ್ರದ ಅಭಿವೃದ್ದಿಗೆ 8650 ಕೋಟಿ ಬಿಡುಗಡೆ | ಬಂಪರ್ ಅನುದಾನದ ಖುಷಿಯಲ್ಲಿ ಶಾಸಕರು

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸಜ್ಜುಗೊಳಿಸುವ ಜತೆಗೆ ಸರ್ಕಾರದ ವರ್ಚಸ್ಸು ವೃದ್ಧಿಗೆ ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ 224 ಕ್ಷೇತ್ರಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದ್ದಾರೆ.

 

ಬಜೆಟ್​ನಲ್ಲಿ ತಾವು ಘೋಷಿಸಿರುವ ಯೋಜನೆಗಳ ಜಾರಿಗೆ ಬೊಮ್ಮಾಯಿ ವಿಶೇಷ ಆಸಕ್ತಿ ತೋರಿಸಿದ್ದಾರೆ. ಈಗಾಗಲೇ 160 ಘೋಷಣೆ ಹೊರಬಿದ್ದಿವೆ. ಇನ್ನೂ 20ಕ್ಕೂ ಹೆಚ್ಚು ಆದೇಶಗಳು ಹೊರಬರಬೇಕಾಗಿದೆ. ಅವುಗಳ ಅನುಷ್ಠಾನಕ್ಕೂ ವೇಗ ನೀಡಲು ಮುಂದಾಗಿದ್ದಾರೆ.

ಅವಧಿಪೂರ್ವ ಚುನಾವಣೆ?: ಮುಖ್ಯಮಂತ್ರಿಗಳು ಯಾವಾಗ ಎಲ್ಲ ಕ್ಷೇತ್ರಗಳಿಗೂ ವಿವಿಧ ಇಲಾಖೆಗಳ ಮೂಲಕ ಅನುದಾನ ನೀಡಲು ನಿರ್ಧಾರ ಕೈಗೊಂಡರೋ ರಾಜಕೀಯ ವಲಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಬಹುದೇ ಎಂಬ ಅನುಮಾನ ಕಾಡಲಾರಂಭಿಸಿದೆ. ಪಕ್ಷದ ಹೈಕಮಾಂಡ್ ಗುಜರಾತ್ ಜತೆಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಬಹುದೇ ಎಂಬ ಪ್ರಶ್ನೆಯೂ ಇದೆ. ಆದರೆ ಬಿಜೆಪಿ ಮೂಲಗಳು ಮಾತ್ರ ಅವಧಿಪೂರ್ವ ಚುನಾವಣೆ ಇಲ್ಲವೇ ಇಲ್ಲ ಎನ್ನುತ್ತಿವೆ.

ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆ 224. ಅದರಲ್ಲಿ ಬಿಜೆಪಿ 119, ಕಾಂಗ್ರೆಸ್ 69, ಜೆಡಿಎಸ್ 32, ಬಿಎಸ್​ಪಿ 1, ಪಕ್ಷೇತರರು 2 ಹಾಗೂ ಸ್ಪೀಕರ್ ಇದ್ದಾರೆ. ಬಿಜೆಪಿಗೆ ಒಬ್ಬ ಪಕ್ಷೇತರ ಹಾಗೂ ಬಿಎಸ್​ಪಿ ಬೆಂಬಲ ನೀಡುತ್ತಿವೆ. ಸ್ಪೀಕರ್ ಸೇರಿ ಬಿಜೆಪಿಯ ಸಂಖ್ಯೆ 122 ಇದೆ. ಕಾಂಗ್ರೆಸ್​ಗೆ ಒಬ್ಬ ಪಕ್ಷೇತರ ಸೇರಿ 70 ಆಗುತ್ತದೆ. ಆಡಳಿತ ಪಕ್ಷದ ಸದಸ್ಯರ ಸಂಖ್ಯೆ 122 ಆದರೆ, ಪ್ರತಿಪಕ್ಷಗಳ ಸಂಖ್ಯೆ 102. ಬಿಜೆಪಿ ಸದಸ್ಯರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ.ಗಳಂತೆ ಒಟ್ಟಾರೆ 6100 ಕೋಟಿ ರೂ.ಗಳು ಹಾಗೂ ಪ್ರತಿಪಕ್ಷಗಳ ಸದಸ್ಯರ ಕ್ಷೇತ್ರಗಳಿಗೆ ತಲಾ 25 ಕೋಟಿ ರೂ.ಗಳಂತೆ ಒಟ್ಟಾರೆ 2550 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತದೆ.

ನೀರಾವರಿಗೆ ಒತ್ತು: ಮಹದಾಯಿ ಸೇರಿದಂತೆ ಕೆಲವು ನೀರಾವರಿ ಯೋಜನೆಗಳಿಗೆ ಈ ಸರ್ಕಾರದ ಅವಧಿಯಲ್ಲಿಯೇ ಚಾಲನೆ ನೀಡಬೇಕು, ಕೇಂದ್ರ ಸರ್ಕಾರದ ಎಲ್ಲ ಅನುಮತಿಗಳನ್ನು ಶೀಘ್ರದಲ್ಲಿ ಪಡೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ದೇಶಿಸಿದ್ದಾರೆ. ಅದಕ್ಕೆ ತಕ್ಕಂತೆ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಹಣ ಬಿಡುಗಡೆ ಹೇಗೆ?: ಬಜೆಟ್​ನಲ್ಲಿ ವಿವಿಧ ಇಲಾಖೆಗಳಿಗೆ ಅನುದಾನ ನೀಡಲಾಗಿದೆ. ಆ ಮೊತ್ತವನ್ನೇ ಕ್ರೋಡೀಕರಿಸಿ ಹಂಚಿಕೆ ಮಾಡಲಾಗುತ್ತದೆ. ಶಾಸಕರು ಸೂಚಿಸಿದ ಕಾಮಗಾರಿ ಕೈಗೊಳ್ಳಲಾಗುತ್ತದೆ.

Leave A Reply

Your email address will not be published.